ನವ ದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಪ್ರತಿಭಟನಾ ನಿರತ ರೈತರ ವಿರುದ್ಧ ಬಲ ಪ್ರಯೋಗ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜಧಾನಿಯ ಹೊರ ವಲಯದ ಬೃಹತ್ ಧಾನ್ಯ ಮಾರುಕಟ್ಟೆಯಲ್ಲಿ ಇಂದು(ಮಂಗಳವಾರ, ಸಪ್ಟೆಂಬರ್ 7) ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದನ್ನು ಖಂಡಿಸಲಾಯಿತು.
ಇದನ್ನೂ ಓದಿ : ಗೋಲ್ಡನ್ ಚಾನ್ಸ್ ಹೆಸರಲ್ಲಿ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿದ ಬಳ್ಳಾರಿ ವಿವಿ
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ, ‘ಶಸ್ತ್ರ ರಹಿತವಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಬಲ ಪ್ರಯೋಗ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಸಾವಿರಾರು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು‘ ಎಂದು ಹೇಳಿದ್ದಾರೆ.
ನೆರೆಯ ಹರಿಯಾಣ ರಾಜ್ಯಕ್ಕೆ ಸೇರಿರುವ ಬೃಹತ್ ಧಾನ್ಯ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಲ್ಲದೇ, ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಪ್ರತಿಭಟನಾ ನಿರತ ರೈತರ ಮೇಲೆ ಮಿತಿಮೀರಿ ಬಲ ಪ್ರಯೋಗ ಮಾಡುವುದು ಕೇವಲ ಕ್ರೂರ ಮಾತ್ರವಲ್ಲ, ಇದು ಪ್ರತೀಕಾರದ ಕೃತ್ಯವಾಗಿದೆ‘ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಮೊಬೈಲ್, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಲ್ಲದೇ, ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಕೇರಳ ನಿಫಾ ಸೋಂಕು : ಬಾಲಕನ ಸಂಪರ್ಕಕ್ಕೆ ಬಂದವರ ವರದಿ ನೆಗೆಟಿವ್ : ಸಚಿವೆ ವೀಣಾ ಜಾರ್ಜ್