Advertisement

ಕೋಪ

06:00 AM Oct 14, 2018 | |

ಸಮಾಜ ಜೀವಿಯಾಗಿರುವ ಮನುಷ್ಯ ಬದುಕಿನ ವಿವಿಧ ಸನ್ನಿವೇಶ – ಸಂದರ್ಭಗಳಲ್ಲಿ ಹಲವಾರು ವಿಧದ ಭಾವನೆಗಳನ್ನು ಅನುಭವಿಸುತ್ತಾನೆ. ಇನ್ನಿತರ ಭಾವನೆಗಳಂತೆಯೇ ಸಿಟ್ಟು ಅಥವಾ ಕೋಪವೂ ಒಂದು ಆರೋಗ್ಯಪೂರ್ಣ ಭಾವನೆ. ಆದರೆ ಮನುಷ್ಯ ಅದರ ಮೇಲೆ ನಿಯಂತ್ರಣವನ್ನು ಕಳೆದುಕೊಂಡಾಗ ಅದು ಅನಾರೋಗ್ಯಕರವಾಗುತ್ತದೆ.

Advertisement

ನಮ್ಮ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಹಾಗೂ ಸಿಟ್ಟನ್ನು ನಿಭಾಯಿಸುವ ಮಾರ್ಗೋಪಾಯಗಳಲ್ಲಿ ಪಳಗುವ ಮೂಲಕ ಕೋಪ ನಾವು ಅಂದುಕೊಂಡದ್ದಕ್ಕಿಂತ ಸುಲಭವಾಗುತ್ತದೆ. 

ಭಾವನೆಗಳು ನಮಗೆ ವಿವಿಧ ಸಂದೇಶಗಳನ್ನು ರವಾನಿಸುವುದಕ್ಕಾಗಿ ಇರುವಂಥವು. ಇತರ ಯಾವುದೇ ಭಾವನೆಗಳಂತೆ ಕೋಪವೂ ಸಂದರ್ಭದ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ. ಹೀಗಾಗಿ ಕೋಪಗೊಳ್ಳುವುದು ಕೆಟ್ಟದಲ್ಲ.

ನಾವು ಕೋಪವನ್ನು ಹೇಗೆ ಬಳಸುತ್ತೇವೆ?
ಜನರು ಸಿಟ್ಟನ್ನು ಆರೋಗ್ಯಕರ ಮತ್ತು ಅನಾರೋಗ್ಯಕರವಾದ ಅನೇಕ ರೀತಿಗಳಲ್ಲಿ ಉಪಯೋಗಿಸುತ್ತಾರೆ. ಗೌರವ ಪಡೆಯಲು, ಸಮರ್ಥಿಸಿಕೊಳ್ಳಲು ಅಥವಾ ಇತರರನ್ನು ನೋಯಿಸಲು ನಾವು ಕೋಪವನ್ನು ವ್ಯಕ್ತಪಡಿಸುತ್ತೇವೆ. ಕೋಪವನ್ನು ವ್ಯಕ್ತಪಡಿಸುವ ಅನಾರೊಗ್ಯಕರವಾದ ಈ ಮಾರ್ಗಗಳಲ್ಲಿ ನಿಜವಾಗಿಯೂ ನಾವು ಹೆದರಿಕೆ, ತಪ್ಪಿತಸ್ಥ ಭಾವನೆ, ಮುಜುಗರ, ನೋವು, ನಾಚಿಕೆ, ಅಭದ್ರತೆ ಅಥವಾ ಸೋತು ಹೋಗುವ ಭಾವನೆಗಳನ್ನು ಮರೆಮಾಚಲು ಸಿಟ್ಟನ್ನು ಉಪಯೋಗಿಸುತ್ತೇವೆ. ಆದ್ದರಿಂದ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವನ್ನು ಆರೋಗ್ಯಯುತ ಮಾರ್ಗದಲ್ಲಿ ಹರಿಯಬಿಡುವುದು ನಿಜವಾದ ಸವಾಲಾಗಿದೆ. 

ಕೋಪ ಹೇಗೆ ನಮ್ಮ ಮೇಲೆ  ಪರಿಣಾಮ ಬೀರುತ್ತದೆ?
– ದೈಹಿಕ ಆರೋಗ್ಯ: ಅಧಿಕ ರಕ್ತದೊತ್ತಡ, ಮಧುಮೇಹ, ನಿದ್ರಾ ಸಮಸ್ಯೆಗಳು, ಹೃದ್ರೋಗಗಳು ಮತ್ತು ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುವಂತಹ ಅಪಾಯಗಳಿಗೆ ತುತ್ತಾಗುವಂತೆ ಮಾಡುತ್ತದೆ. 
– ಮಾನಸಿಕ ಆರೋಗ್ಯ: ಸಿಟ್ಟು ಇಳಿದ ಬಳಿಕ ಕಾಣಿಸಿಕೊಳ್ಳುವ ಪಶ್ಚಾತ್ತಾಪ, ತಪ್ಪಿತಸ್ಥ ಭಾವನೆಗಳಿಂದ ಖನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
– ವೈಯಕ್ತಿಕ ಜೀವನ: ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಜತೆಗೆ ಹಿತಕರ ವಾತಾವರಣದಲ್ಲಿ ಇರಲು ಅಥವಾ ಪ್ರಾಮಾಣಿಕವಾಗಿ, ವಿಶ್ವಾಸಾರ್ಹವಾಗಿ ಇರಲು ತೊಂದರೆ ಒಡ್ಡುತ್ತದೆ.
– ಸಾಮಾಜಿಕ ಗೌರವವನ್ನು ನಾಶ ಮಾಡುತ್ತದೆ ಹಾಗೂ ನಿರೀಕ್ಷಿತ ಗೌರವ ಲಭಿಸುವುದಿಲ್ಲ.

Advertisement

ಕೋಪ ನಿಭಾವಣೆ
1. ಸಿಟ್ಟಿನ ಪರದೆಯನ್ನು ಸರಿಸಿ ಒಳಗಿಣುಕಿ
– ಸಂದರ್ಭಕ್ಕೆ ಹೊಂದಿಕೊಂಡ ನಿಜವಾದ ಭಾವನೆಯನ್ನು ಅರ್ಥ ಮಾಡಿಕೊಳ್ಳಿ.
– ವ್ಯಕ್ತಿಯು ಭಾವನೆಗಳ ಅಭಿವ್ಯಕ್ತಿಯನ್ನು ನಿರುತ್ತೇಜಿಸುವ ಕುಟುಂಬದಲ್ಲಿ ಬೆಳೆದವರೇ ಎಂಬುದನ್ನು ತಿಳಿಯಿರಿ.
– ಇತರರ ದೃಷ್ಟಿಕೋನ, ಅಭಿಪ್ರಾಯಗಳ ಜತೆಗೆ ರಾಜಿ ಮಾಡಿಕೊಳ್ಳುವುದು, ಒಪ್ಪುವುದು ಬಲಹೀನತೆ ಅಥವಾ ವೈಫ‌ಲ್ಯ ಎಂಬ ಭಾವನೆ.
– ನೋಯುವುದು, ಪಶ್ಚಾತ್ತಾಪ, ನಾಚಿಕೆ ಅಥವಾ ಭಯದಂತಹ ಭಾವನೆಗಳನ್ನು ವ್ಯಕ್ತಪಡಿಸುವುದು ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬ ಭಾವನೆ. 
– ವಿಷಯಗಳನ್ನು ವಿಶ್ಲೇಷಿಸುವ ಇತರ ಮಾರ್ಗಗಳನ್ನು ಸ್ವೀಕರಿಸದಿರುವುದು – ಅಹಮಿಕೆ.
– ಸಿಟ್ಟು ಎಂಬುದು ದೀರ್ಘ‌ಕಾಲಿಕ ಒತ್ತಡ, ನೋವು, ಖನ್ನತೆ ಅಥವಾ ಉದ್ವಿಗ್ನತೆಯಂತಹ ದೇಹಾಂತರ್ಗತ ಆರೋಗ್ಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು.

ಮೇಲ್ಕಂಡ ಎಲ್ಲ ಸನ್ನಿವೇಶಗಳಲ್ಲಿ ಸಿಟ್ಟನ್ನು ಎದುರಾದ ಸನ್ನಿವೇಶದಿಂದ ಪಲಾಯನ ಹೂಡುವುದಕ್ಕಾಗಿ ಉಪಯೋಗಿಸಲಾಗುತ್ತದೆ. 

2. ಎಚ್ಚರಿಕೆಯ ಸಂಕೇತಗಳ 
ಮೂಲಕ ಸನ್ನದ್ಧರಾಗಿರಿ

ಸಿಟ್ಟು ಸ್ಫೋಟಗೊಳ್ಳುವುದಕ್ಕೆ ಮುನ್ನ ದೇಹವು ಹೃದಯ ವೇಗವಾಗಿ ಬಡಿದುಕೊಳ್ಳುವುದು, ವೇಗವಾದ ಉಸಿರಾಟ, ಮುಷ್ಟಿ/ ದವಡೆ ಬಿಗಿಯುವುದು, ಮುಖ/ಗಲ್ಲ ಕೆಂಪಾಗುವುದು, ಹಸ್ತ ಬೆವರುವುದು ಮತ್ತು ತಲೆ ಭಾರವಾಗುವಂತಹ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಇಂತಹ ದೈಹಿಕ ಬದಲಾವಣೆಗಳ ಬಗ್ಗೆ ಅರಿತುಕೊಂಡಿರಿ ಹಾಗೂ ನಿಯಂತ್ರಣ ಕಳೆದುಕೊಳ್ಳುವುದಕ್ಕೆ ಮುನ್ನ ಸನ್ನಿವೇಶವನ್ನು ಹಿಡಿತಕ್ಕೆ ತರಲು ಪ್ರಯತ್ನಿಸಿ.

3. ಪ್ರಚೋದಕಗಳನ್ನು 
ಅರ್ಥ ಮಾಡಿಕೊಳ್ಳುವುದು

ಸಿಟ್ಟು ಸ್ಫೋಟಗೊಳ್ಳುವುದಕ್ಕೆ ಕೆಲವು ಹತಾಶೆಯ ಸನ್ನಿವೇಶಗಳು ಪ್ರಚೋದಕಗಳಾಗಿ ಕೆಲಸ ಮಾಡುತ್ತವೆ. ಸನ್ನಿವೇಶಗಳಿಗೆ ಬದಲಾಗಿ  ಋಣಾತ್ಮಕ ಆಲೋಚನಾ ಕ್ರಮಗಳೇ ಇವುಗಳಿಗೆ ಇಂಧನವಾಗುತ್ತವೆ. ಋಣಾತ್ಮಕ ಚಿಂತನಾ ಕ್ರಮಗಳಿಗೆ ಕೆಲವು ಉದಾಹರಣೆಗಳು ಎಂದರೆ: 
– ಅತಿ ಸಾಮಾನ್ಯಿàಕರಣ
– ನಿರ್ಣಯಕ್ಕೆ ಬಂದುಬಿಡುವುದು
– ಮನಸ್ಸು ಓದುವುದು
– ಭೂತಕಾಲವನ್ನು ನೆನಪಿಸಿಕೊಳ್ಳುವುದು
– ದೂರುವುದು
– “ಆಗಲೇ ಬೇಕು’, “ಹೀಗೆಯೇ ಇರಬೇಕು’ ಎಂಬಂತಹ ಆಲೋಚನಾ ಕ್ರಮ

4. ಶಾಂತರಾಗಲು ಕಲಿತುಕೊಳ್ಳಿ
ಎಚ್ಚರಿಕೆಯ ಮುನ್ಸೂಚನೆಗಳು ಮತ್ತು ಪ್ರಚೋದಕಗಳು ಕಾಣಿಸಿಕೊಂಡ ಬಳಿಕ ಸಿಟ್ಟು ಆಸ್ಫೋಟಗೊಳ್ಳುವ ಮುನ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಭಾವನೆಗಳ ಮೇಲೆ ಹತೋಟಿ ಸಾಧಿಸುವ ಕೆಲವು ತಂತ್ರಗಳ ಮುಖಾಂತರ ಇದನ್ನು ಸಾಧಿಸಬಹುದು. ಅವುಗಳೆಂದರೆ:
– ಆಳವಾಗಿ ಉಸಿರಾಡುವುದು
– ಬಿಗಿಗೊಂಡ ಸ್ನಾಯುಗಳನ್ನು ಮಸಾಜ್‌ ಮಾಡುವುದು
– ವ್ಯಾಯಾಮ ಮಾಡುವುದು
– ಆಘ್ರಾಣಿಸುವುದು, ಸ್ಪರ್ಶಿಸುವುದು, ದೃಷ್ಟಿಸುವುದು, ಆಲಿಸುವುದು ಅಥವಾ ರುಚಿ ನೋಡುವಂತಹ ಗಾಢ ಸಂವೇದನೆಗಳ ಮೇಲೆ ಗಮನ ಕೇಂದ್ರೀಕರಿಸುವುದು
– ನಿಧಾನವಾಗಿ ಹಿಮ್ಮುಖವಾಗಿ ಎಣಿಸುವುದು

5. ಪರಿಸ್ಥಿತಿಯನ್ನು ಅವಲೋಕಿಸಿ
ಒಂದು ಕ್ಷಣ ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ:

– ಕೋಪಗೊಳ್ಳುವುದರಿಂದ ನಿಜವಾಗಿಯೂ ಏನಾದರೂ ಪ್ರಯೋಜನ ಇದೆಯೇ?
– ಅದಕ್ಕಾಗಿ ಸಮಯ ಮತ್ತು ಶಕ್ತಿ ವ್ಯಯಿಸುವುದು ಯುಕ್ತವೇ?
– ಅದರಿಂದ ಏನಾದರೂ ವ್ಯತ್ಯಾಸ ಅಥವಾ ಪರಿಣಾಮ ಉಂಟಾಗುತ್ತದೆಯೇ?
– ಅದರಿಂದಾಗಿ ನಿಮ್ಮ ಇನ್ನುಳಿದ ದಿನಗಳು ಮತ್ತು ಸಮಯ ಹಾಳಾಗುವುದು ವಿಹಿತವೇ?

6. ನಿಮ್ಮ ಭಾವನೆ ಅಥವಾ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಇರುವ ಆರೋಗ್ಯಯುತ ಮಾರ್ಗಗಳು:
ಮೇಲ್ಕಂಡ ಯಾವುದಾದರೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ ನಿಮ್ಮ ಅಭಿಪ್ರಾಯ ಅಥವಾ ಭಾವನೆಗಳನ್ನು ಗೌರವಯುತವಾಗಿ ಮತ್ತು ಪರಿಣಾಮಕಾರಿಯಾಗಿ ಹೀಗೆ ವ್ಯಕ್ತಪಡಿಸಿ:

– ನಿಮ್ಮ ಸಿಟ್ಟನ್ನು ಶಾಂತಗೊಳಿಸಲು ಒಂದು ಕ್ಷಣ ವ್ಯಯಿಸಿ
– ನಿಮಗೆ ಸಿಟ್ಟು ತರಿಸಿದ್ದು ಯಾವುದು ಎಂಬುದನ್ನು ಬೆಟ್ಟು ಮಾಡಿ ತೋರಿಸಿ
– ಸಣ್ಣ ಸಣ್ಣ ಸಂಗತಿಗಳನ್ನೂ ಎತ್ತಿ ಹಿಡಿಯಬೇಡಿ ಅಥವಾ ದೊಡ್ಡದು ಮಾಡಬೇಡಿ
– ಎದುರಾಳಿಯನ್ನು ಗೌರವಿಸಿ ಮತ್ತು ನ್ಯಾಯಯುತವಾಗಿ ವಾದಿಸಿ
– ಸಂಬಂಧದ ಪುನರ್‌ಸ್ಥಾಪನೆ ಆದ್ಯತೆಯಾಗಿರಲಿ
– ಎಂದೋ ಆಗಿಹೋದುದರ ಬಗ್ಗೆ ದೂರುವುದಕ್ಕಿಂತ ವರ್ತಮಾನಕ್ಕೆ ಹೆಚ್ಚು ಒತ್ತು ನೀಡಿ
– ಪೂರ್ಣ ವಿರಾಮವನ್ನು ಹಾಕಿಕೊಳ್ಳಿ ಮತ್ತು ಯಾವಾಗ ವಾದ ವಿವಾದವನ್ನು ಬಿಟ್ಟುಕೊಡಬೇಕು ಎಂಬುದನ್ನು ತಿಳಿದುಕೊಳ್ಳಿ
– ಕ್ಷಮಿಸಿ, ಮರೆತು ಬಿಡಿ ಮತ್ತು ಮುಂದೆ ಸಾಗಿ

7. ವೃತ್ತಿಪರರ ಸಹಾಯ ಪಡೆಯಿರಿ
ಇಷ್ಟೆಲ್ಲ ಪ್ರಯತ್ನಗಳ ಬಳಿಕವೂ ನಿಮಗೆ ನಿಯಂತ್ರಣ ಸಾಧ್ಯವಾಗದೆ ಇದ್ದರೆ ವೃತ್ತಿಪರರ ಸಹಾಯ ಪಡೆಯಿರಿ.
ನೆನಪಿಡಿ, “”ಸಿಟ್ಟು ಎಂಬುದು ನಿಮ್ಮ ಮನಸ್ಸಿಗಿಂತ ಹೆಚ್ಚು ಚುರುಕಾಗಿ ನಿಮ್ಮ ಬಾಯಿಯನ್ನು ಸಕ್ರಿಯಗೊಳಿಸುವ ಒಂದು ಭಾವನೆ. ಅದರ ಮೇಲೆ ನಿಮ್ಮ ನಿಯಂತ್ರಣ ಇರಲಿ; ಇಲ್ಲವಾದರೆ ಅದೇ ನಿಮ್ಮನ್ನು ಆಳುತ್ತದೆ.”

– ಡಾ| ಕೃತಿಶ್ರೀ ಎಸ್‌.ಎಸ್‌. , 
ಮನಶಾÏಸ್ತ್ರ ವಿಭಾಗ, 
ಕೆಎಂಸಿ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next