ಸುಳ್ಯ: ನಾಲ್ಕು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡ ಮತದಾನವಾದಾಗ ನಡೆದಿದ್ದ ಆಣೆ-ಪ್ರಮಾಣದ ವಿಚಾರವೇ ಹಾಲಿ ಶಾಸಕ, ಸಚಿವ ಅಂಗಾರ ಅವರ ಸ್ಪರ್ಧೆಗೆ ವಿರೋಧ ತಂದೊಡ್ಡುತ್ತಿದೆ!
ಸುಳ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಎಸ್.ಅಂಗಾರ ಹಾಗೂ ಅವರನ್ನು ವಿರೋಧಿಸುತ್ತಿರುವ ತಂಡದ ನಡುವೆ ತೆರೆಮರೆಯಲ್ಲಿ ಕದನ ಮುಂದುವರಿದಿದ್ದು, ಹಳೆ ಸಿಟ್ಟೇ ಇದಕ್ಕೆ ಕಾರಣ ಅನ್ನುವ ಗುಟ್ಟು ರಟ್ಟಾಗಿದೆ.
ಅಂಗಾರ ಸ್ಪರ್ಧೆಗೆ ವಿರೋಧ: ಪಕ್ಷ ಅವಕಾಶ ನೀಡಿದರೆ ತಾನು 9ನೇ ಬಾರಿ ಕಣಕ್ಕಿಳಿಯಲು ಸಿದ್ಧ ಎಂದು ಎಸ್.ಅಂಗಾರ ಹೇಳಿದ ಬಳಿಕ ಸುಳ್ಯದ ಬಿಜೆಪಿ ಕೋಟೆಯೊಳಗಿನ ತಲ್ಲಣ ಹೊರಗೆ ಬಂದಿದೆ. ಅಲ್ಲಿಯವರೆಗೆ ಹೊಸ ಮುಖಕ್ಕೆ ಅವಕಾಶ ಸಿಗಲಿದ್ದು, ಯಾರಿರಬಹುದು ಎಂಬುದಷ್ಟೇ ಚರ್ಚೆಯಲ್ಲಿತ್ತು. ಅಂಗಾರ ಆಕಾಂಕ್ಷಿ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಅವರ ವಿರುದ್ಧದ ಗುಂಪು ಪ್ರಬಲ ವಿರೋಧ ವ್ಯಕ್ತಪಡಿಸಿತು. ಇದರ ಬೆನ್ನಲ್ಲೇ ಅಂಗಾರ ಅವರ ಪರವಾಗಿ ಇನ್ನೊಂದು ಗುಂಪು ವರಿಷ್ಠರನ್ನು ಸಂಪರ್ಕಿಸಿದೆ. ಎರಡೂ ಗುಂಪುಗಳು ಬೆಂಗಳೂರಿಗೆ ತೆರಳಿ ಪಕ್ಷ ಹಾಗೂ ಸಂಘದ ವರಿಷ್ಠರನ್ನು ಭೇಟಿ ಮಾಡಿ ಒತ್ತಡ ಹೇರಲಾರಂಭಿಸಿವೆೆ. ಸುಳ್ಯದಂತಹ ಕ್ಷೇತ್ರದಲ್ಲಿ ಉಂಟಾಗಿರುವ ಈ ಬೆಳವಣಿಗೆ ವರಿಷ್ಠರಿಗೂ ತಲೆನೋವಾಗಿದೆ.
ಅಭಿಪ್ರಾಯ ಸಂಗ್ರಹದಲ್ಲೂ ಪೈಪೋಟಿ: ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತಂತೆ ಮಂಗಳೂರಿನ ಸಂಘನಿಕೇತನದಲ್ಲಿ ಶುಕ್ರವಾರ ನಡೆದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ಅಂಗಾರ ಪರ ಹಾಗೂ ವಿರುದ್ಧವಾಗಿ ಎರಡು ತಂಡಗಳು ಪ್ರತ್ಯೇಕವಾಗಿ ತೆರಳಿರುವ ಮಾಹಿತಿ ಇದೆ. ಮತಪತ್ರದ ಮಾದರಿಯಲ್ಲಿ ಹೆಸರು ಉಲ್ಲೇಖೀಸುವ ಸಂದರ್ಭ ತಮ್ಮ ಪರವಾದ ಅಭ್ಯರ್ಥಿಗೆ ಹೆಚ್ಚು ಮತ ಬರುವಂತೆ ಎರಡೂ ತಂಡಗಳು ಕಾರ್ಯಯೋಜನೆ ರೂಪಿಸಿದ್ದವು. ಲಭ್ಯ ಮಾಹಿತಿ ಪ್ರಕಾರ ಎಸ್.ಅಂಗಾರ, ಭಾಗೀರಥಿ ಮುರುಳ್ಯ, ಸೀತಾರಾಮ ಪುತ್ತೂರು, ಶಿವಪ್ರಸಾದ್ ಪೆರುವಾಜೆ ಮೊದಲಾದವರ ಹೆಸರನ್ನು ದಾಖಲಿಸಲಾಗಿದೆ ಎಂದು ಮುಖಂಡರೋರ್ವರು ತಿಳಿಸಿದ್ದಾರೆ.
ಏನಿದು ಅಡ್ಡಮತದಾನ?: 2019ರಲ್ಲಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗೆ ಗೆಲ್ಲಬಹುದಾದಷ್ಟು ಮತಗಳು ಲಭ್ಯ ಇದ್ದರೂ ಏಳು ಸೊಸೈಟಿಗಳ ಪ್ರತಿನಿಧಿಗಳ ಅಡ್ಡ ಮತದಾನ ಪರಿಣಾಮ ಅಭ್ಯರ್ಥಿ ಸೋಲನುಭವಿಸಿದ್ದರು. ಡಾ| ಎಂ.ಎನ್.ಆರ್. ಬೆಂಬಲಿತ ಕಾಂಗ್ರೆಸ್ ಮುಖಂಡ ಗೆದ್ದಿದ್ದರು. ಇದರಿಂದ ಸುಳ್ಯದ ಬಿಜೆಪಿಯ ಸಂಘಟನ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಬಿದ್ದು, ಸಂಘ ಪರಿವಾರ ಹಾಗೂ ಬಿಜೆಪಿ ಪ್ರಮುಖರು ಸತ್ಯ ಶೋಧನೆಗೆ ಮುಂದಾದರು. ಸಾಕಷ್ಟು ಪ್ರಯತ್ನಿಸಿದ್ದರೂ ಅಡ್ಡ ಮತದಾನ ಮಾಡಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗಲಿಲ್ಲ. ಕೊನೆಗೆ ಕಾಸರಗೋಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ 17 ಮಂದಿಯೂ ಆಣೆ-ಪ್ರಮಾಣ ಮಾಡಬೇಕು ಎನ್ನುವ ಸೂಚನೆ ಪಕ್ಷದ ಕಡೆಯಿಂದ ಹೊರಡಿಸಲಾಯಿತು. ಇದನ್ನು ಧಾರ್ಮಿಕ ಕೇಂದ್ರಕ್ಕೆ ಕೊಂಡೊ ಯ್ಯುವುದಕ್ಕೆ ಆಕ್ಷೇಪವಿದ್ದರೂ ಆಣೆ-ಪ್ರಮಾಣಕ್ಕೆ ವೇದಿಕೆ ಸಿದ್ಧವಾಯಿತು. ಇಬ್ಬರು ಗೈರಾಗಿ ಉಳಿದ 15 ಮಂದಿ ತಾವು ಅಡ್ಡ ಮತದಾನ ಮಾಡಿಲ್ಲ ಎಂದು ಆಣೆ ಮಾಡಿದ್ದರು. ಆಣೆ ಪ್ರಮಾಣ ದಲ್ಲಿಯು ಸತ್ಯ ಬಹಿರಂಗಗೊಳ್ಳದ ಕಾರಣ ಎಲ್ಲ 17 ಮಂದಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದಿಂದ ಸೂಚನೆ ಬಂತು. ಇದಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತವಾಗಿ ಪಕ್ಷದ ಒಳಗೆ ಎರಡು ಗುಂಪು ಸೃಷ್ಟಿಯಾಯಿತು. ಪಕ್ಷದ ವಿರುದ್ಧವಾಗಿಯೇ ಸೆಟೆದು ನಿಂತ ಪರಿಣಾಮ ಕೆಲವು ಸೊಸೈಟಿಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಯಿತು. ಅದಾದ ಬಳಿಕ ತಣ್ಣಗಾಗುತ್ತಲೇ ಹೋದ ವಿವಾದ ಹೊರಹೋದವರನ್ನು ಮತ್ತೆ ಪಕ್ಷಕ್ಕೆ ಕರೆ ತರುವಷ್ಟರ ಮಟ್ಟಿಗೆ ಮುಂದುವರಿದಿತ್ತು. ಆದರೆ ಎಲ್ಲರೂ ಒಂದಾದರೂ, ಹಳೆ ಘಟನೆಯ ಬಗ್ಗೆ ಎರಡು ಗುಂಪಿನ ನಡುವೆ ಅಸಮಾಧಾನ ಹಾಗೆಯೇ ಇತ್ತು ಅನ್ನುವುದಕ್ಕೆ ಈಗಿನ ಬೆಳವಣಿಗೆ ಸಾಕ್ಷಿ.
ಆಣೆ-ಪ್ರಮಾಣ ಟಿಕೆಟ್ ವಿರೋಧಕ್ಕೆ ಮೂಲ!
ಕಾರಣಿಕ ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಿದ್ದು, ಅನಂತರದಲ್ಲಿ ತಪ್ಪು ಕಾಣಿಕೆ ಹಾಕಲು ಅವಕಾಶ ಕಲ್ಪಿಸಿಲ್ಲ ಎನ್ನುವ ಬಗ್ಗೆ ಒಂದು ತಂಡ ಶಾಸಕ ಅಂಗಾರ ಸಹಿತ ಪಕ್ಷದ ಕೆಲವರ ವಿರುದ್ಧ ತೀವ್ರ ಅಸಮಾಧಾನ ಹೊಂದಿತ್ತು. ಕಳೆದ ನಾಲ್ಕು ವರ್ಷಗಳಿಂದಲೂ ತೆರೆಮರೆಯಲ್ಲಿ ಈ ಅಸಮಾಧಾನ ಪ್ರಕಟವಾಗುತ್ತಲೇ ಇತ್ತು. ಅಂಗಾರ ಅವರಿಗೆ ಅವಕಾಶ ನೀಡಲೇಬಾರದು ಅನ್ನುವುದನ್ನು ಈ ಗುಂಪು ರಾಜ್ಯಾಧ್ಯಕ್ಷರ ಸಹಿತ ಸಂಘ ಪರಿವಾರದ ನೇತಾರರ ಗಮನಕ್ಕೆ ತಂದಿತ್ತು. ಅಂಗಾರ ಅವರು ಕೂಡ ಈ ಗುಂಪಿನ ಜತೆ ನಿಕಟ ಸಂಬಂಧ ಇಟ್ಟು ಕೊಂಡಿರಲಿಲ್ಲ. ಇದೀಗ ದಿಢೀರ್ ಆಗಿ ಹಾಲಿ ಶಾಸ ಕರ ಹೆಸರು ಮುನ್ನೆಲೆಗೆ ಬಂದ ಬೆನ್ನಲ್ಲೇ ಅಸಮಾ ಧಾನಿತ ಗುಂಪು ಅಲರ್ಟ್ ಆಗಿದ್ದು ಹಾಲಿ ಶಾಸಕರಿಗೆ ಟಿಕೆಟ್ ಸಿಗದಂತೆ ಕಸರತ್ತು ಮುಂದುವರಿಸಿದೆ. ಇನ್ನೊಂದು ದಿಕ್ಕಿನಲ್ಲಿ ಶಾಸಕರಿಗೆ ನಿಷ್ಠೆ ಹೊಂದಿರುವ ಗುಂಪು ಅಂಗಾರ ಅವರನ್ನು ಮತ್ತೆ ಕಣಕ್ಕಿಳಿಸಲು ಸರ್ವ ಪ್ರಯತ್ನ ನಡೆಸಿದೆ. ಈ ಎರಡು ಗುಂಪಿನ ಒಳ ಸಂಘರ್ಷದಲ್ಲಿ ಯಾರು ಟಿಕೆಟ್ ಗಿಟ್ಟಿಸಬಹುದು ಅನ್ನುವ ಕುತೂಹಲ ಈಗ ಮೂಡಿದೆ.
-ಕಿರಣ್ ಪ್ರಸಾದ್ ಕುಂಡಡ್ಕ