Advertisement

ಅಂಗನವಾಡಿ ವ್ಯವಸ್ಥೆ ಬಲಹೀನ ಮಾಡದಿರಿ

11:02 AM May 28, 2019 | Suhan S |

ಬೆಳಗಾವಿ: ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳನ್ನು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ವರ್ಗಾಯಿಸಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭ ಮಾಡುವುದಾಗಿ ಹೇಳಿ ಆದೇಶ ಹೊರಡಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಿಐಟಿಯು ಹಾಗೂ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು ಸರಕಾರ ಇಂತ ಕ್ರಮದ ಮೂಲಕ ಸಮಗ್ರ ಬಾಲ ವಿಕಾಸ ಯೋಜನೆಯನ್ನು ಬಲಹೀನ ಮಾಡಲು ಹೊರಟಿದೆ. ಒಂದು ಸಂಸ್ಥೆಯನ್ನು ಸಬಲಗೊಳಿಸಲು ಇನ್ನೊಂದು ಸಂಸ್ಥೆಯನ್ನು ದುರ್ಬಲಗೊಳಿಸುವ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಾರಂಭವಾದ ಸಮಗ್ರ ಬಾಲವಿಕಾಸ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 65 ಸಾವಿರ ಕೇಂದ್ರಗಳಲ್ಲಿ 1 ಲಕ್ಷ 30 ಸಾವಿರ ಅಂಗನವಾಡಿ ನೌಕರರು ಕಳೆದ 40 ವರ್ಷಗಳಿಂದ 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿ, ಪೌಷ್ಟಿ‌ಕ ಆಹಾರ ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡುವ ಕೆಲಸವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಸರಕಾರ ಈಗ ಅಂಗನವಾಡಿಗಳನ್ನೇ ಬಲಹೀನ ಮಾಡಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಗ್ರ ಬಾಲ ವಿಕಾಸ ಯೋಜನೆಯಡಿ ಮಾರ್ಗಸೂಚಿಗಳ ಪ್ರಕಾರ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಈಗಿರುವ ವ್ಯವಸ್ಥೆಯನ್ನು ಬಲಗೊಳಿಸುವುದನ್ನು ಬಿಟ್ಟು ಹೊಸ ವ್ಯವಸ್ಥೆ ಜಾರಿಗೆ ತರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಸರಕಾರದ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ವಿ.ಪಿ.ಕುಲಕರ್ಣಿ ಕಳೆದ 30 ವರ್ಷಗಳಿಂದ ಸಾವಿರಾರು ಅಂಗನವಾಡಿ ನೌಕರರು ಕಡಿಮೆ ವೇತನದಲ್ಲಿ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಮೂಲಕ ತಮ್ಮ ಜೀವನವನ್ನೇ ಕಳೆದಿದ್ದಾರೆ. ಹೀಗಿರುವಾಗ ಸರಕಾರ ಈಗ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳನ್ನು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ವರ್ಗಾಯಿಸಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭ ಮಾಡುವುದಾಗಿ ಹೇಳಿರುವುದು ನೌಕರರಲ್ಲಿ ಆತಂಕ ಉಂಟುಮಾಡಿದೆ ಎಂದರು.

Advertisement

ಈಗಾಗಲೇ ರಾಜ್ಯದಲ್ಲಿ 16.40 ಲಕ್ಷ ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿದ್ದಾರೆ. ಇಮತಹ ಪರಿಸ್ಥಿತಿಯಲ್ಲಿ ಸರಕಾರ ತನ್ನ ಆದೇಶ ಪುನರ್‌ ಪರಿಶೀಲಿಸಬೇಕು. ಎಲ್ಕೆಜಿ-ಯುಕೆಜಿ ಯನ್ನು ಅಂಗನವಾಡಿ ಕೇಂದ್ರಲ್ಲಿಯೇ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವ ಅಧ್ಯಕ್ಷ ಜಿ.ಎಂ. ಜೈನೆಖಾನ್‌, ಅಧ್ಯಕ್ಷ ದೊಡ್ಡವ್ವ ಪೂಜಾರಿ, ಕಾರ್ಯದರ್ಶಿ ಗೋದಾವರಿ ರಾಜಾಪುರೆ, ಟಿ ಎ ಭಭಗೌಡ, ವಿ ಎನ್‌ ಕಂಪ್ಲಿ, ಸರಸ್ವತಿ ಮಾಳಶೆಟ್ಟಿ, ಪಿ.ವಿ. ಸಾಲಿಮಠ, ವಿದ್ಯಾ ಕುಂಬಾರ, ಮುನೀರಾ ಮುಲ್ಲಾ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next