Advertisement

ಅಂಗನವಾಡಿ ಮಕ್ಕಳ ಆಹಾರ ಕಾರ್ಯಕರ್ತೆಯ ಮನೆಯಲ್ಲಿ!

01:21 PM Apr 24, 2022 | Team Udayavani |

ರಾಮನಗರ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೂರೈಕೆಯಾಗಬೇಕಾದ ಆಹಾರ ಪದಾರ್ಥಗಳು ಕೇಂದ್ರದ ಕಾರ್ಯಕರ್ತೆಯೊಬ್ಬರ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳು ಇನ್ನಷ್ಟೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

Advertisement

ನಗರಸಭೆಯ 2ನೇ ವಾರ್ಡು ಮಾರುತಿ ನಗರದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗೀತಾ ಅವರ ಮನೆಯಲ್ಲಿ ಈ ಪದಾರ್ಥಗಳು ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಪೋಷಕ ಹರೀಶ್‌ ಅವರ ಮನವಿಯ ಮೇರೆಗೆ ಅಂಗನವಾಡಿ ಕೇಂದ್ರದ ಈ ಭಾಗದ ಮೇಲ್ವಿಚಾರಕ ಅಧಿ ಕಾರಿ ಶಿವಮ್ಮ ಶುಕ್ರವಾರ ಸಂಜೆ ದಾಳಿ ಮಾಡಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಡಬೇಕಾದ ಅಕ್ಕಿ, ಬೇಳೆ, ಅವಲಕ್ಕಿ ಇತ್ಯಾದಿ ಪೌಷ್ಟಿಕಾಂಶದ ಆಹಾರ ಪದಾರ್ಥಗಳು ಹಲವಾರು ಚೀಲಗಳಲ್ಲಿ ಲಭ್ಯವಾಗಿದೆ.

ಈ ಪದಾರ್ಥಗಳೆಲ್ಲ ಮಕ್ಕಳಿಗೆ ಕೊಡ ಬೇಕಾದ ಪದಾರ್ಥಗಳು ಎಂದು ಉಸ್ತುವಾರಿ ಅಧಿಕಾರಿ ಶಿವಮ್ಮ ದೃಢಪಡಿಸಿದ್ದಾರೆ. ದಾಳಿಯ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಗೀತಾ ಎಂಬ ಕಾರ್ಯಕರ್ತೆಯ ಮನೆಯಲ್ಲಿ ಪತ್ತೆಯಾಗಿರುವುದು ಇಲಾಖೆ ಮಕ್ಕಳಿಗೆ ಪೂರೈಸುವ ಪದಾರ್ಥಗಳೇ ಆಗಿವೆ ಎಂದು ಶಿವಮ್ಮ ವೀಡಿಯೋದಲ್ಲಿ ದೃಢಪಡಿಸಿದ್ದಾರೆ.

ಕಾರ್ಯಕರ್ತೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಅಧಿಕಾರಿಗಳು: ಈ ಪ್ರಕರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಪೋಷಕ ಹರೀಶ್‌, ಪತ್ತೆಯಾಗಿರುವುದು ಇಲಾಖೆಯ ಸ್ವತ್ತು ಎಂದು ಸ್ವತಃ ಮೇಲ್ವಿಚಾರಕಿ ಶಿವಮ್ಮ ಸ್ಪಷ್ಟಪಡಿಸಿದ್ದಾರೆ. ಆದರೆ ಇಲಾಖೆಯ ಅಧಿಕಾರಿಗಳು ಮಾತ್ರ ಅಂಗ ನವಾಡಿ ಕಾರ್ಯಕರ್ತೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರೀಶ್‌ ಆರೋಪಿಸಿದ್ದಾರೆ.

ಶಿಶುಪಾಲನ ಅಭಿವೃದ್ಧಿ ಅಧಿಕಾರಿ ರಮಣ ಅವರನ್ನು ತಾವು ಸಂಪರ್ಕಿಸಿದಾಗ ಇಲಾಖೆ ವತಿಯಿಂದ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯರಿಗೂ ಕೊಡುತ್ತೇವೆ. ಅದನ್ನು ಇಟ್ಟು ಕೊಂಡಿರಬಹುದು. ಆಕೆ ಹೆದರಿಕೆಯಿಂದ ತಾನು ತಪ್ಪು ಮಾಡಿರುವುದಾಗಿ ಹೇಳಿರಬಹುದು ಎಂದೆಲ್ಲ ವಾದಿಸಿದ್ದಾರೆ ಎಂದು ಹರೀಶ್‌ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾರ್ಯಕರ್ತೆಯ ವಿರುದ್ಧದ ಆರೋಪದ ಪರಿಶೀಲನೆಗೂ ಮುನ್ನ ಇಲಾಖೆಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಹಲವಾರು ಸಂಶಯಗಳಿಗೆ ಕಾರಣವಾಗಿದೆ.

Advertisement

ಅಧಿಕಾರಿಗಳ ವಿರುದ್ಧ : ಸರ್ಕಾರಕ್ಕೆ ದೂರು; ಎಚ್ಚರಿಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತೊಂದರೆ ಕೊಡುವ ಉದ್ದೇಶ ಯಾರಿಗೂ ಇಲ್ಲ. ಆದರೆ ಮಕ್ಕಳಿಗೆ ಸಲ್ಲಬೇಕಾದ ಪದಾರ್ಥಗಳು ಹೀಗೆ ದುರ್ಬಳಕೆಯಾಗಬಾರದು ಎಂಬುದಷ್ಟೇ ತಮ್ಮ ಕಾಳಜಿ. ಒಬ್ಬರಿಗೆ ಶಿಕ್ಷೆಯಾ ದರೆ ಉಳಿದವರು ಎಚ್ಚೆತ್ತಿಕೊಳ್ಳುತ್ತಾರೆ. ಹೀಗಾಗಿ ಈ ಪ್ರಕರಣವನ್ನು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಕ್ರಮವಹಿಸ ಬೇಕು. ಇಲ್ಲದಿದ್ದರೆ ಈ ಪ್ರಕರಣದ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳ ಗಮನ ಸೆಳೆಯುವುದಾಗಿ ವಿದ್ಯಾರ್ಥಿ ಸಂಘದ ಜಿಲ್ಲಾ ಪೋಷಕ ಹರೀಶ್‌ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next