ಜೇವರ್ಗಿ: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲ ಸೌಲಭ್ಯ ಒದಗಿಸಬೇಕು. ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಮೊಟ್ಟೆಗಳನ್ನು ಆಹಾರ ಪದಾರ್ಥಗಳ ಜತೆಯಲ್ಲಿಯೇ ಸರಬರಾಜು ಮಾಡಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಟ ವೇತನ ಜಾರಿ ಮಾಡಬೇಕು. ಅಂಗನವಾಡಿ ನೌಕರರನ್ನು ಖಾಯಂಗೊಳಿಸಬೇಕು, ಖಾಯಂಗೊಳಿಸುವವೆಗೂ ಕನಿಷ್ಟ 26 ಸಾವಿರ ರೂ. ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಗಜರಾಬಾಯಿ ಹಾಲಘತ್ತರಗಾ, ಪ್ರಾಂತ ರೈತ ಸಂಘದ ಅಧ್ಯಕ್ಷ ಸುಭಾಷ ಹೊಸಮನಿ, ಸುಮಿತ್ರಾ ಕಟ್ಟಿ ಜೇವರ್ಗಿ, ಇಂದಿರಾ ಶಿವಪೂರ, ಅನುಸುಬಾಯಿ ರೇವನೂರ, ನೀಲಮ್ಮ ಅರಳಗುಂಡಗಿ, ಸುನಿತಾ ನೇರಡಗಿ, ಧುರ್ಗಮ್ಮ ಕೂಡಿ, ಲಲಿತಾ ಮುತ್ತಕೋಡ, ಬಸಮ್ಮ ಪಾಟೀಲ, ಹಸೀನಾಬೇಗಂ ಅರಳಗುಂಡಗಿ, ಗೀತಾ ನರಿಬೋಳ, ಕಮಲಾ ಬಿರಾಳ, ಕಮಲಾ ನೆಲೋಗಿ, ಶಂಕರಲಿಂಗ ರೇವನೂರ ಸೇರಿದಂತೆ ನೂರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.