Advertisement

ಸೌಲಭ್ಯಕ್ಕೆ ಅಂಗನವಾಡಿ ನೌಕರರ ಆಗ್ರಹ

05:43 PM Mar 30, 2022 | Shwetha M |

ವಿಜಯಪುರ: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು.

Advertisement

ಮಂಗಳವಾರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಬೃಹತ್‌ ಪ್ರತಿಭಟನೆ ಆರಂಭಿಸಿದ ಅಂಗನವಾಡಿ ನೌಕರರು, ಮಹಾತ್ಮ ಗಾಂಧೀಜಿ ವೃತ್ತ, ಬಸವೇಶ್ವರರ ವೃತ್ತ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಕೇಂದ್ರ ಸರ್ಕಾರ ಕಡಿತ ಮಾಡಿರುವ ಶೇ.40 ಅನುದಾನ ನೀಡಬೇಕು. 16ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸಿನಂತೆ ಯೋಜನೆಗಳಲ್ಲಿ ದುಡಿಯುತ್ತಿರುವ ಎಲ್ಲ ನೌಕರರನ್ನು ಕೆಲಸಗಾರರೆಂದು ಪರಿಗಣಿಸಬೇಕು. ಶಾಸನಬದ್ಧ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಆಹಾರ ಭದ್ರತೆಗೆ ಕಡಿತವಾಗಿರುವ 65 ಸಾವಿರ ಕೋಟಿ ರೂ. ಅನುದಾನ ವಾಪಸು ಕೊಡಬೇಕು. ಈಗಿರುವ ಸಂಪೂರ್ಣ ಅನುದಾನವನ್ನು ಬಳಸಬೇಕು. ಬೆಲೆಯೇರಿಕೆ ಆಧಾರದಲ್ಲಿ 24 ಸಾವಿರ ರೂ. ಕನಿಷ್ಟ ವೇತನ ಜಾರಿ ಮಾಡಬೇಕು. ಐಸಿಡಿಎಸ್‌ ಯೋಜನೆಗಳನ್ನು ಕಾಯಂ ಮಾಡಬೇಕು. ಐಸಿಡಿಎಸ್‌ ಯೋಜನೆಯನ್ನು ಖಾಸಗೀಕರಣ ಮಾಡಬಾರದು. ಎಲ್ಲ ಯೋಜನಾ ನೌಕರರಿಗೆ ನಿವೃತ್ತಿ ಸೌಲಭ್ಯ ಕೊಡಬೇಕು. ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಐಸಿಡಿಎಸ್‌ ನಲ್ಲಿ ಎನ್‌ಇಪಿ ಶಿಫಾರಸುಗಳನ್ನು ಜಾರಿ ಮಾಡಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಕೊರೊನಾ ನಡುವೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯಗಳನ್ನು ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

Advertisement

ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ, ಸುವರ್ಣಾ ಹಲಗಣಿ, ಜಯಶ್ರೀ ಪೂಜಾರಿ, ಗೀತಾ ನಾಯಕ, ರಿಜವಾನಾ ಕರೊಶಿ, ಸುರೇಖಾ ರಜಪೂತ, ದಾನಮ್ಮ ಸುಗ್ರಿ, ಅಶ್ವಿ‌ನಿ ತಳವಾರ, ಶೋಭಾ ಕಬಾಡೆ, ಸರಸ್ವತಿ ಮಠ, ಸರೋಜನಿ ಪಾಟೀಲ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next