Advertisement
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಅನೇಕ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೇ, ಬಾಡಿಗೆ ಮನೆಗಳಲ್ಲಿ ನಡೆಯುತ್ತಿರುವುದು ದುರಂತವಾಗಿದೆ. ಗ್ರಾಮದಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳ ಪೈಕಿ 4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಈ ಕೇಂದ್ರಗಳು ಸುಮಾರು 15 ವರ್ಷಗಳಿಂದ ಇಕ್ಕಟ್ಟಿನ ಪ್ರದೇಶ ಹಾಗೂ ಜಾಗಗಳಲ್ಲಿ ನಡೆಯುತ್ತಿವೆ. ಈ ಗ್ರಾಮದ 2, 3, 4 ಮತ್ತು 7ನೇ ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಇದರಲ್ಲಿ 2, 3, 4ನೇ ಕೇಂದ್ರಗಳು ಆರಂಭವಾಗಿ ಸುಮಾರು 17ವರ್ಷಗಳು ಕಳೆದರು ಇನ್ನೂ ಇವುಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಕೇಂದ್ರಗಳು ನಾಟಕದ ಕಂಪನಿಯಂತೆ 2-3 ವರ್ಷಕ್ಕೊಮ್ಮೆ ಮನೆಗಳನ್ನು ಬದಲಾವಣೆ ಮಾಡುತ್ತ ಕೇಂದ್ರವನ್ನು ಕಾರ್ಯಕರ್ತೆಯರು ನಡೆಸುತ್ತಿದ್ದಾರೆ.
Related Articles
Advertisement
ಇಲ್ಲಿಯ ನಾಲ್ಕು ಕೇಂದ್ರಗಳು ಹಳೆಯ ಮನೆಗಳಲ್ಲಿ ನಡೆಯುತ್ತಿವೆ. ಈ ಮನೆಗೆ ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಇಕ್ಕಟ್ಟಾದ ಸ್ಥಳದಲ್ಲಿ ಕೇಂದ್ರ ನಡೆಯುತ್ತಿದೆ. ಕೊಠಡಿಯ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಅಗತ್ಯ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಮೇಲ್ಛಾವಣಿ ದುರಸ್ತಿಯಲ್ಲಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಸುರಿಯುತ್ತದೆ. ಇಂತಹ ಸ್ಥಿತಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಮಾಡಲು ಸ್ಥಳಾವಕಾಶವಿಲ್ಲದೇ, ಗರ್ಭಿಣಿಯರಿಗೆ ನೀಡುವ ಊಟವನ್ನು ಅವರ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ.
ಹಿರೇಮನ್ನಾಪುರ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳು ಸುಮಾರು 10-15 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ನಡೆಯುತ್ತಿವೆ. ಅಲ್ಲಿಯ ಗ್ರಾಪಂಗೆ ನಿವೇಶನ ನೀಡಲು ಮನವಿ ಮಾಡಿದರು ಇದುವರೆಗೂ ಯಾವುದೂ ಪ್ರಯೋಜನವಾಗಿಲ್ಲ. –ನಾಗಮ್ಮ, ಅಂಗನವಾಡಿ ಮೇಲ್ವಿಚಾರಕಿ
ತಾಲೂಕಿನಲ್ಲಿ ಸುಮಾರು 13 ಕೇಂದ್ರಗಳು ಬಾಡಿಗೆ ಮನೆಗಳಲ್ಲಿವೆ. ಹಿರೇಮನ್ನಾಪುರ ಗ್ರಾಮದ 4 ಕೇಂದ್ರಗಳು 10-15 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಸದ್ಯ ರಾಜ್ಯ ಪಂಚಾಯತ್ ರಾಜ್ ಆಯುಕ್ತಾಲಯ ಬೆಂಗಳೂರು ಅವರು ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಸಮೀಪದ ಶಾಲೆಗಳಲ್ಲಿ ಕೊಠಡಿ ಒದಗಿಸಲು ತಿಳಿಸಿದ್ದಾರೆ. -ವಿರೂಪಾಕ್ಷಯ್ಯ, ಸಿಡಿಪಿಒ ಕುಷ್ಟಗಿ
ಮಲ್ಲಿಕಾರ್ಜುನ ಮೆದಿಕೇರಿ