Advertisement

ಆನ್‌ಲೈನ್‌ನಲ್ಲೇ ಅಂಗನವಾಡಿ ಕೇಂದ್ರ ಮಾಹಿತಿ

04:24 PM Nov 28, 2019 | Naveen |

ಕೂಡ್ಲಿಗಿ: ಸ್ನೇಹ ಆ್ಯಪ್‌ ಮೂಲಕ ಅಂಗನವಾಡಿ ಕೇಂದ್ರಗಳ ಎಲ್ಲ ಮಾಹಿತಿಗಳನ್ನು ಡಿಜಿಟಲೀಟಕರಣ ಮಾಡುವುದರ ಮೂಲಕ ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡಲಾಗುತ್ತಿದೆ.

Advertisement

ಹಾಗಾಗಿ ಅಂಗನವಾಡಿ ಮೇಲ್ವಿಚಾರಕಿಯರಿಗೆ ಮತ್ತು ಕಾರ್ಯಕರ್ತೆಯರಿಗೆ ಡಿಜಿಟಲ್‌ ದಾಖಲೀಕರಣದ ಬಗ್ಗೆ ತರಬೇತಿ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಆನ್‌ ಲೈನ್‌ನಲ್ಲಿಯೇ ಅಂಗನವಾಡಿ ಕೇಂದ್ರಗಳ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಷಾ ಅವರು ತಿಳಿಸಿದರು.

ಅವರು ಬುಧವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಿಗೆ ಹಾಗೂ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಸ್ನೇಹ ಆ್ಯಪ್‌ ಡಿಜಿಟಲ್‌ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿಗೆ ಚಾಲನೆ ನೀಡಿದ ನಂತರ ಮಾತನಾಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಗರ್ಭಿಣಿ, ಬಾಣಂತಿಯರ ವಿವರ, ಅವರ ಸಮಸ್ಯೆಗಳು, ಮಗು ಜನಿಸಿದ ಮೇಲೆ ಆ ಮಗುವಿಗೆ ಒಂದು ಐಡಿ ಬರುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಮೊಬೈಲ್‌ನಲ್ಲಿ ಇಂಥ ದತ್ತಾಂಶಗಳು ದಾಖಲಾಗುತ್ತದೆ. ಸ್ನೇಹ ಆಪ್‌ ಮೂಲಕ ಈ ಡಿಜಿಟಲೀಕರಣ ಮಾಡಲಾಗುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವ ರೀತಿಯಲ್ಲಿ ಡಿಜಿಟಲೀಕರಣ ಮಾಡಬಹುದು ಎಂದು ತರಬೇತಿಯಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೂಡ್ಲಿಗಿ ಸಿಡಿಪಿಓ ಮಧುಸೂಧನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ನೇಹ ಆ್ಯಪ್‌ ಮೂಲಕ ಆಯಾ ಹಳ್ಳಿಗಳಲ್ಲಿಯ ಮಕ್ಕಳ ವಯಸ್ಸು, ಎತ್ತರ, ತೂಕ ಸೇರಿದಂತೆ ಆ ಮಗುವಿನ ಸಮಗ್ರ ವಿವರಗಳು, ಇಲಾಖೆಯಿಂದ ನೀಡುವ ಸೇವೆಗಳ ಬಗ್ಗೆ ಆಗಿಂದಾಗ್ಗೆ ಆನ್‌ಲೈನ್‌ನಲ್ಲಿ ಅಪ್‌ ಲೋಡ್‌ ಆಗಲಿದ್ದು ಡಿಜಿಟಲೀಕರಣದಿಂದ ಎಲ್ಲರಿಗೂ ಅನುಕೂಲವಾಗಲಿದ್ದು ಎಲ್ಲೆಲ್ಲಿ ಸಮಸ್ಯೆಗಳಿಗೆ ಅಲ್ಲಿ ಸಮಸ್ಯೆ ನಿವಾರಣೆ ಮಾಡಲು ಅನುಕೂಲವಾಗಲಿದೆ ಎಂದರು. ಪ್ರಾಥಮಿಕವಾಗಿ ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಿದ್ದು ನಂತರ ಹಂತ ಹಂತವಾಗಿ ತರಬೇತಿ ನೀಡಲಾಗುವುದು. ರಾಜ್ಯದಲ್ಲಿಯೇ ಕುಳಿತುಕೊಂಡು ಅಧಿಕಾರಿಗಳು ಎಲ್ಲ ರೀತಿಯ ಇಲಾಖೆಯ ಕಾರ್ಯವೈಖರಿ, ಸಾಧನೆಗಳು, ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದರು.

Advertisement

ತರಬೇತಿ ಕಾರ್ಯಾಗಾರಕ್ಕೆ ಕೂಡ್ಲಿಗಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಆಯ್ದ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಗರಿಬೊಮ್ಮನಹಳ್ಳಿ ಸಿಡಿಪಿಓ ಸುದೀಪ್‌ ಕುಮಾರ್‌, ಹೂವಿನಹಡಗಲಿ ಸಿಡಿಪಿಓ ರಾಮನಗೌಡ, ಬಳ್ಳಾರಿ ಸಿಡಿಪಿಓ ಜಲಾಲಪ್ಪ, ಹರಪನಹಳ್ಳಿ ಸಿಡಿಪಿಓ ಮಂಜುನಾಥ ಸೇರಿದಂತೆ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಹ್ಯಾಳ್ಯಾ  ನಾಗಪ್ಪ, ಮೇಲ್ವಿಚಾರಕಿ ಟಿ. ಅನ್ನಪೂರ್ಣಮ್ಮ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಅಂಗನವಾಡಿ ಮೇಲ್ವಿಚಾರಕಿಯರು, 20ಕ್ಕೂ ಹೆಚ್ಚು ಆಯ್ದ ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next