Advertisement

ಅಂಗನವಾಡಿ ಆಕರ್ಷಣೆಗೆ ರೈಲ್ವೆ ಬೋಗಿಯ ವಿನ್ಯಾಸ!

03:12 PM Dec 20, 2019 | Suhan S |

ಬಸವಕಲ್ಯಾಣ: ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರಲಿ ಎಂಬ ಉದ್ದೇಶದಿಂದ ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳನ್ನು ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಸ್ವ ಇಚ್ಛೆಯಿಂದ ರೈಲ್ವೆಯಂತೆ ಆಕರ್ಷಣೀಯವಾಗಿ ಮಾಡಿದ್ದು, ಈ ಕೇಂದ್ರಗಳು ಇತರ ಕೇಂದ್ರಗಳಿಗೆ ಮಾದರಿಯಾಗಿವೆ. ಸರ್ಕಾರ ಅಂಗವಾಡಿ ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗಲಿ ಎಂಬ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಆಕರ್ಷಿಸಲು ಈ ರೀತಿಯ ವಿಭಿನ್ನ ಪ್ರಯೋಗ ಮಾಡಲಾಗಿದೆ.

Advertisement

ತಾಲೂಕಿನ 38 ಗ್ರಾಪಂ ಪೈಕಿ ಹಣಮಂತವಾಡಿ (ಆರ್‌)-1, ರಾಂಪೂರ-1, ಯರಬಾಗನಲ್ಲಿ, 2, ಸದಲಾಪೂರ 2, ಪಂಡರಿಗೇರಾ 1 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ರೈಲ್ವೆಯಂತೆ ಬಣ್ಣದಲ್ಲಿ ವಿನ್ಯಾಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೀಲಿ, ಹಳದಿ ರೈಲು ಮತ್ತು ಕಬ್ಬಿಣದ ಕಿಟಕಿಗಳು ಸೇರಿದಂತೆ ಅದರ ಮೇಲೆ ಭಾರತೀಯ ರೇಲ್‌, ಹಣಮಂತವಾಡಿ ಎಕ್ಸ್‌ಪ್ರೆಸ್‌, ಪಂಡರಗೇರಾ ತಾಂಡಾದಿಂದ ರಾಜೇಶ್ವರ ಎಂದು ಬರೆದಿರುವುದನ್ನು ನೋಡಿದರೆ, ನಿಜವಾದ ರೈಲು ಬಂದಿರುವಂತೆ ಭಾಸವಾಗುತ್ತದೆ. ಬೆಳಗ್ಗೆ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬಂದು ಸಾಲಾಗಿ ನಿಂತು ಕೇಂದ್ರದ ಒಳಗೆ ಹೋಗುತ್ತಿದ್ದರೆ, ಮಕ್ಕಳು ಎಲ್ಲಿಗಾದರೂ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂಬ ಕಲ್ಪನೆ ಬರುತ್ತದೆ.

ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ತಾಲೂಕಿನ ಒಟ್ಟು 411 ಅಂಗನವಾಡಿ ಕೇಂದ್ರಗಳ ಪೈಕಿ 8 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ರೈಲ್ವೆ ಮಾದರಿಯಲ್ಲಿ ಬಣ್ಣ ಹಚ್ಚಲಾಗಿದೆ. ಇವು ಮಕ್ಕಳನ್ನು ಕೇಂದ್ರಗಳತ್ತ ಸೆಳೆಯುವಂತೆ ಮಾಡಿವೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿಯೊಂದು ಅಂಗನವಾಡಿ ಕೇಂದ್ರಗಳನ್ನು ವಿಶಿಷ್ಠ ಮತ್ತು ವಿಭಿನ್ನ ರೀತಿಯಲ್ಲಿ ನಿರ್ಮಿಸಿದರೆ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಬರಲಿದ್ದಾರೆ ಎಂಬುವುದು ಸಾರ್ವಜನಿಕರ ಅಭಿಪ್ರವಾಯ.

ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರುವುದು ಕಡಿಮೆಯಾಗಿದ್ದು, ಹೀಗಾಗಿ ಜಿಪಂ ವತಿಯಿಂದ ಅಂಗನವಾಡಿ ಕೇಂದ್ರಗಳ ನವೀಕರಣಕ್ಕಾಗಿ ಬಂದ ಅನುದಾನವನ್ನು ಮಕ್ಕಳಿಗೆ ಆಕರ್ಷಣೆಯಾಗಲಿ ಎಂಬ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಿಗೆ ರೈಲ್ವೆ ಮಾದರಿಯಲ್ಲಿ ಬಣ್ಣ ಹಚ್ಚಲಾಗಿದೆ. ಮುಂದಿನ ದಿನಗಳಲ್ಲಿ 14ನೇ ಹಣಕಾಸು ಯೋಜನೆಯಡಿ ಮಕ್ಕಳಿಗೆ ಅನುಕೂಲವಾಗುವಂತಹ ಸೌಕರ್ಯಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. -ಮಡೋಳಪ್ಪಾ ಪಿ.ಎಸ್‌., ತಾಪಂ ಇಒ

 

Advertisement

-ವೀರಾರೆಡ್ಡಿ ಆರ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next