Advertisement

ಮಾಂಗಲ್ಯ ಸರ ಅಡವಿಟ್ಟು ಮೊಟ್ಟೆ ವಿತರಣೆ ! ಅಂಗನವಾಡಿ ಕಾರ್ಯಕರ್ತೆಯ ಕಾಳಜಿ

12:49 AM Mar 18, 2021 | Team Udayavani |

ಉಡುಪಿ: ಕೊರೊನಾ ಸಂಕಷ್ಟ ಕಾಲದಲ್ಲಿ ಸರಕಾರದಿಂದ ಸಕಾಲದಲ್ಲಿ ಬಿಲ್‌ ಪಾವತಿಯಾಗದಿದ್ದರೂ ಮಕ್ಕಳು, ಗರ್ಭಿಣಿಯರಿಗೆ ಪೌಷ್ಟಿಕಾಂಶದ ಕೊರತೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಉಡುಪಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತನ್ನ ಮಾಂಗಲ್ಯ ಸರವನ್ನು ಅಡವಿಟ್ಟು ಫ‌ಲಾನುಭವಿಗಳಿಗೆ ಮೊಟ್ಟೆ ವಿತರಿಸಿದ್ದಾರೆ.

Advertisement

ಉಡುಪಿ ವಲಯದ ಅಂಬಲಪಾಡಿ ಕಿದಿಯೂರು ಗ್ರಾ.ಪಂ. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ. 27 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿರುವ ಅವರ ಪತಿ ಅನಾರೋಗ್ಯ ಪೀಡಿತರಾಗಿದ್ದು, ಮನೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯೂ ಅವರದ್ದೇ ಆಗಿದೆ. ಮಗಳಿಗೆ ಮದುವೆ ಮಾಡಿಸಿದ್ದಾರೆ. ಮಗ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದಾರೆ.

ಸಂಕಷ್ಟದಲ್ಲಿ ಮೊಟ್ಟೆ ವಿತರಣೆ
ತಿಂಗಳಿಗೆ 30 ಗರ್ಭಿಣಿ-ಬಾಣಂತಿಯರು ಮತ್ತು 20 ಮಕ್ಕಳು ಈ ಅಂಗನವಾಡಿಯ ಫ‌ಲಾನುಭವಿಗಳಾಗಿದ್ದು, ಮಾಸಿಕ 4,000 ರೂ. ಮೊಟ್ಟೆಗೆಂದೇ ವ್ಯಯವಾಗುತ್ತದೆ. ಇಲಾಖೆಯಿಂದ ಹಣ ಬಾರದಿದ್ದಾಗ ಇಂದಿರಾ ಮೊದಲಿಗೆ ಕೈಯಿಂದಲೇ ಭರಿಸುತ್ತಿದ್ದರು. ಅನಂತರ ಕೈಸಾಲ ಮಾಡಿದ್ದರು. ಕೈಸಾಲ ಹಿಂದಿರುಗಿಸಬೇಕಾಗಿ ಬಂದಾಗ ಅನ್ಯ ದಾರಿಕಾಣದೆ ಮಾಂಗಲ್ಯ ಸರವನ್ನು 26,000 ರೂ.ಗೆ ಒತ್ತೆ ಇರಿಸಿದ್ದರು.

ಸರಕಾರದಿಂದ ಸಕಾಲದಲ್ಲಿ ಮೊಟ್ಟೆ ಬಿಲ್‌ ಮೊತ್ತ ಜಮೆ ಆಗದಿದ್ದರೂ ನಿಗದಿತ ಸಮಯದೊಳಗೆ ಫ‌ಲಾನುಭವಿಗಳಿಗೆ ಮೊಟ್ಟೆ ವಿತರಿಸಬೇಕಾಗಿದೆ. ನಾವು ತಿಂಗಳ ವೇತನದಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಮೊಟ್ಟೆ ನೀಡುತ್ತಿದ್ದೆವು. ಲಾಕ್‌ಡೌನ್‌ ಬಳಿಕ ಫ‌ಲಾನುಭವಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು ಹಣ ಬಾರದೆ ನಿಭಾಯಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಕಾರ್ಯಕರ್ತೆಯರು.

ಪಾವತಿಯಾಗದ ಹೆಚ್ಚವರಿ ಮೊತ್ತ
ಸರಕಾರ ಒಂದು ಮೊಟ್ಟೆಗೆ 5 ರೂ. ಪಾವತಿಸುತ್ತಿದ್ದು, ಕೆಲವಡೆ ಮೊಟ್ಟೆ ಬೆಲೆ ಭಿನ್ನವಾಗಿರುವುದರಿಂದ ವ್ಯತ್ಯಾಸದ ಮೊತ್ತವನ್ನು ಆಯಾ ಸ್ಥಳೀಯಾಡಳಿತ ನೀಡುವಂತೆ ಸರಕಾರ ಆದೇಶಿಸಿದೆ. ಬಿಲ್‌ಗ‌ಳನ್ನು ಸ್ಥಳೀಯಾಡಳಿತಕ್ಕೆ ನೀಡಿದರೂ ಪಾವತಿಸಲು ಸ್ಥಳೀಯಾಡಳಿತಗಳು ಮೀನಮೇಷ ಎಣಿಸುವುದರಿಂದ ತಿಂಗಳಿಗೆ 500ರಿಂದ 1,000 ರೂ. ವರೆಗಿನ ಹೆಚ್ಚುವರಿ ಮೊತ್ತವನ್ನು ಕಾರ್ಯಕರ್ತೆಯರು ಕೈಯಿಂದ ಹಾಕಬೇಕಾಗಿ ಬರುತ್ತಿದೆ.

Advertisement

ಜಿಲ್ಲೆಯಲ್ಲಿ ಮೊಟ್ಟೆ ಬಿಲ್‌ ಅನ್ನು ಮುಂಗಡವಾಗಿ ಬಾಲವಿಕಾಸ ಖಾತೆಗೆ ಹಾಕಲಾಗುತ್ತದೆ. ಆದರೆ ಸಪ್ಟೆಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ಮೊಟ್ಟೆ ವಿತರಣೆಗೆ ಅಗತ್ಯವಿರುವ ಬಜೆಟ್‌ ಬಂದಿರಲಿಲ್ಲ. ಮಾರ್ಚ್‌ ಮೊದಲ ವಾರದಲ್ಲಿ ಮಾರ್ಚ್‌ ತಿಂಗಳ ಅಂತ್ಯದವರೆಗೆ ಎಲ್ಲ ಬಿಲ್‌ ಪಾವತಿ ಮಾಡಲು ಆದೇಶಿಸಲಾಗಿದೆ. ಖಜಾನೆಯಲ್ಲಿ ಬಿಲ್‌ ಪಾವತಿಯಾಗುತ್ತಿದೆ.
– ಶೇಶಪ್ಪ, ಡಿ.ಡಿ.ಪಿ.ಐ. ಉಪನಿರ್ದೇಶಕರು

ಕೆಲವು ಫ‌ಲಾನುಭವಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲೇಬೇಕಾದ ಅನಿವಾರ್ಯ ಇದೆ. ಅವರಿಗಷ್ಟೇ ಮೊಟ್ಟೆ ನೀಡಿ ಇತರರನ್ನು ಬಿಡುವಂತಿಲ್ಲ. ಬೇರೆ ಯಾವುದೇ ದಾರಿ ಕಾಣದೆ ಮಾಂಗಲ್ಯ ಸರವನ್ನು ಅಡವಿಟ್ಟು ಹಣ ಪಡೆದಿದ್ದೆ. ಇತ್ತೀಚೆಗಷ್ಟೇ ಸರಕಾರದಿಂದ 26,000 ರೂ. ಬಿಲ್‌ ಪಾವತಿಯಾಗಿದ್ದು, ಸರವನ್ನು ಬಿಡಿಸಿಕೊಂಡು ಬಂದಿದ್ದೇನೆ. 800 ರೂ. ಬಡ್ಡಿ ಕಟ್ಟಿದ್ದೇನೆ.
– ಇಂದಿರಾ, ಅಂಗನವಾಡಿ ಕಾರ್ಯಕರ್ತೆ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next