Advertisement

ಖಾಸಗಿ ನರ್ಸರಿ ಮಾದರಿಯ ಸರಕಾರಿ ಅಂಗನವಾಡಿ ಉದ್ಘಾಟನೆಗೆ ಸಜ್ಜು

02:20 AM Jul 11, 2018 | Team Udayavani |

ಬೆಳ್ತಂಗಡಿ: ಸರಕಾರಿ ಅಂಗನವಾಡಿ ಕೇಂದ್ರ ಎಂದರೆ ಸಣ್ಣದೊಂದು ಕಟ್ಟಡ, ಕಿರಿದಾದ ಅಂಗಳ, ಹತ್ತನ್ನೂ ದಾಟದ ಮಕ್ಕಳ ಸಂಖ್ಯೆ ಎಂಬ ಭಾವನೆ ಹೆಚ್ಚಿನ ವರಲ್ಲಿದೆ. ಆದರೆ ಇಲ್ಲೊಂದು ಅಂಗನವಾಡಿ ಕೇಂದ್ರ ಯಾವುದೇ ಖಾಸಗಿ ನರ್ಸರಿಗೂ ಕಡಿಮೆಯಿಲ್ಲದ ರೀತಿಯಲ್ಲಿ ಅಭಿವೃದ್ಧಿಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂಡಿದೆ. ಅಭಿವೃದ್ಧಿಯ ವಿಚಾರದಲ್ಲಿ ಒಂದಿಲ್ಲೊಂದು ಸಾಧನೆ ಮಾಡುತ್ತಾ ಮುಂದುವರಿದಿರುವ ಬೆಳ್ತಂಗಡಿ ತಾ|ನ ಲಾೖಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡ ಜು. 14ರಂದು ಉದ್ಘಾಟನೆಗೊಳ್ಳಲಿದ್ದು, ಇದರಲ್ಲಿ ಪಡ್ಲಾಡಿ ಅಂಗನವಾಡಿ ಕೇಂದ್ರದ ಕಟ್ಟಡ ವಿನೂತನ ರೀತಿಯಲ್ಲಿ ನಿರ್ಮಾಣಗೊಂಡಿದೆ.

Advertisement

18.50 ಲಕ್ಷ ರೂ. ವೆಚ್ಚ
ಪಡ್ಲಾಡಿ ಅಂಗನವಾಡಿ ಕೇಂದ್ರವು ಸುಮಾರು 18.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದರಲ್ಲಿ 12.50 ಲಕ್ಷ ರೂ. ಗ್ರಾ.ಪಂ.ನಿಂದ ಬಳಸಿಕೊಳ್ಳಲಾಗಿದೆ. ಉಳಿದಂತೆ 2 ಲಕ್ಷ ರೂ. ದಾನಿಯೊಬ್ಬರು ನೀಡಿದ್ದು, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಬೆಳ್ತಂಗಡಿ ಸಹಿತ ದಾನಿಗಳ ಸಹಕಾರದಿಂದ ಕೇಂದ್ರ ನಿರ್ಮಾಣಗೊಂಡಿದೆ.

60 ಸೆಂಟ್ಸ್‌ ವಿಸ್ತಾರ ಸ್ಥಳ
ಪ್ರಸ್ತುತ ಪಡ್ಲಾಡಿ ಶಾಲೆಯ ಒಂದು ಬದಿಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ 60 ಸೆಂಟ್ಸ್‌ ಸ್ಥಳವನ್ನು ಗುರುತಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಅಂಗನವಾಡಿ ಕೇಂದ್ರಕ್ಕೆ 5ರಿಂದ 10 ಸೆಂಟ್ಸ್‌ ಸ್ಥಳ ಬಳಸಿದರೂ ಇಲ್ಲಿ ಪ್ರತ್ಯೇಕ ನಿರ್ಮಾಣಗಳಿರುವುದರಿಂದ 60 ಸೆಂಟ್ಸ್‌ ಸ್ಥಳವನ್ನು ಬಳಸಿಕೊಳ್ಳಲಾಗಿದೆ. ಕೇಂದ್ರದ ಅಂಗಳವೂ ವಿಸ್ತಾರವಾಗಿದ್ದು, ಅದಕ್ಕೆ ಇಂಟರ್‌ ಲಾಕ್‌ ಅಳವಡಿಸಲಾಗಿದೆ. ಅಂಗನವಾಡಿ ನಿವೇಶನದ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದ್ದು, 15 ಬಗೆಗಳ ಹಣ್ಣಿನ ಗಿಡಗಳು, ತೆಂಗಿನ ಗಿಡಗಳನ್ನು ನೆಡಲಾಗಿದೆ. ಗ್ರಾ.ಪಂ.ನ ಆಡಳಿತ ಮಂಡಳಿಯ ವಿನೂತನ ಕಲ್ಪನೆಯಲ್ಲಿ ಇದು ಅನುಷ್ಠಾನಗೊಂಡಿದೆ ಎಂದು ಗ್ರಾ.ಪಂ. ಪಿಡಿಒ ಪ್ರಕಾಶ್‌ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.

ಕೇಂದ್ರದಲ್ಲಿ ಏನೇನಿದೆ ?
ಸಾಮಾನ್ಯ ಅಂಗನವಾಡಿ ಕೇಂದ್ರದ ಒಂದು ಕಟ್ಟಡದಲ್ಲಿ ಹಾಲ್‌, ಅಡುಗೆ ಕೋಣೆ ಮಾತ್ರ ಇರುತ್ತದೆ. ಆದರೆ ಪಡ್ಲಾಡಿ ಅಂಗನವಾಡಿ ಕೇಂದ್ರದಲ್ಲಿ ವಿಸ್ತಾರ ಕಟ್ಟಡ, ಅದರಲ್ಲಿ ಪ್ರತ್ಯೇಕ ಅಡುಗೆ ಕೋಣೆ, ವಿಸ್ತಾರವಾದ ಡೈನಿಂಗ್‌ ಹಾಲ್‌ ಇದೆ. ಕಟ್ಟಡದ ಹೊರಗಡೆ ವಿಸ್ತಾರದ ಪ್ಲೇ ಏರಿಯಾ ಚಿಣ್ಣರ ಪಾರ್ಕ್‌ ವಿಶೇಷವಾಗಿದೆ.

ಸುಮಾರು 2 ಲಕ್ಷ ರೂ.ಗಳಲ್ಲಿ ದಾನಿಯೊಬ್ಬರ ನೆರವಿನಿಂದ ನಿರ್ಮಾಣಗೊಂಡಿರುವ ಈ ಆಟದ ಸ್ಥಳಕ್ಕೆ ಆಕರ್ಷಕವಾದ ಮೇಲ್ಛಾವಣಿಯನ್ನು ನಿರ್ಮಿಸಲಾಗಿದೆ. ಅದರಲ್ಲಿ ಮಕ್ಕಳಿಗೆ ಜಾರುಬಂಡಿ, ಉಯ್ನಾಲೆ ಹೀಗೆ ಬೇರೆ ಬೇರೆ ಆಟದ ಸಲಕರಣೆಗಳಿವೆ. ಕಟ್ಟಡದ ಇನ್ನೊಂದು ಬದಿಯಲ್ಲಿ ಅತ್ಯಾಧುನಿಕ ಶೈಲಿಯ ಮನೆಗಳೆದುರು ಇರುವಂತೆ ಸುಂದರ ಗಾರ್ಡನ್‌ ನಿರ್ಮಿಸಲಾಗಿದೆ. ಇಲ್ಲಿನ ಎಲ್ಲ ಮಕ್ಕಳಿಗೂ ಸಮವಸ್ತ್ರ ವ್ಯವಸ್ಥೆ, ವಿವಿಧ ಚಿತ್ರಗಳು ಸಹಿತ ಗೋಡೆ ಬರಹಗಳು, ಜತೆಗೆ ಮಕ್ಕಳಿಗೆ ಟಿವಿ ವೀಕ್ಷಣೆ ವ್ಯವಸ್ಥೆ ಹೀಗೆ ಎಲ್ಲ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡು ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಸಜ್ಜಾಗಿದೆ.

Advertisement

ಜು. 14: ಉದ್ಘಾಟನೆ
ಪಡ್ಲಾಡಿ ಸಹಿತ ಗ್ರಾ.ಪಂ.ವ್ಯಾಪ್ತಿಯ ಒಟ್ಟು ಮೂರು ಅಂಗನವಾಡಿ ಕೇಂದ್ರಗಳನ್ನು ಶಾಸಕ ಹರೀಶ್‌ ಪೂಂಜ ಉದ್ಘಾಟಿಸಲಿದ್ದಾರೆ. ಈ 3 ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಗೊಂಡರೆ ಗ್ರಾ.ಪಂ. ವ್ಯಾಪ್ತಿಯ ಎಲ್ಲ 8 ಕೇಂದ್ರಗಳೂ ಮೇಲ್ದರ್ಜೆಗೇರಿದಂತಾಗುತ್ತದೆ. ಜತೆಗೆ ಸುಸಜ್ಜಿತ ಹಿಂದೂ ರುದ್ರಭೂಮಿ ಮುಕ್ತಿಧಾಮ ಉದ್ಘಾಟನೆಗೊಳ್ಳಲಿದೆ.

ಇತರೆಡೆಗಿಂತ ಭಿನ್ನ
ಮಕ್ಕಳಿಗೆ ಪ್ಲೇ ಗ್ರೌಂಡ್‌, ಹಸಿರು ಹೊದಿಕೆ, ಟಿವಿ ಸೌಲಭ್ಯ ಸಹಿತ ವಿನೂತನ ರೀತಿಯಲ್ಲಿ ಈ ಅಂಗನವಾಡಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಇತರೆಡೆಗಿಂತ ಭಿನ್ನವಾಗಿ ಹಾಗೂ ಆಕರ್ಷಕವಾಗಿ ಕೇಂದ್ರವು ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. 
– ಗಿರೀಶ್‌ ಡೊಂಗ್ರೆ, ಉಪಾಧ್ಯಕ್ಷರು, ಲಾೖಲ ಗ್ರಾ.ಪಂ.

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next