Advertisement

ನಿರಂತರ ಮನವಿ ಮಾಡಿದರೂ ಸ್ಪಂದಿಸದ ಇಲಾಖೆ

02:55 AM Nov 23, 2018 | Team Udayavani |

ಅಜೆಕಾರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಜೆಕಾರು ಪೇಟೆಯಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸುವಲ್ಲಿ ಶಿಕ್ಷಣ ಇಲಾಖೆಯ ನಿಧಾನಗತಿಯ ಧೋರಣೆಯಿಂದಾಗಿ ಪಕ್ಕದ‌ ಅಂಗನವಾಡಿಯ ಪುಟಾಣಿಗಳು ಭಯದಲ್ಲಿಯೇ ನಿತ್ಯ ಕಾಲಕಳೆಯಬೇಕಾಗಿದೆ. ಸುಮಾರು 104 ವರ್ಷಗಳ ಹಿಂದೆ ಮಣ್ಣಿನ ಗೋಡೆಯಿಂದ ನಿರ್ಮಿಸಲ್ಪಟ್ಟ ಈ ಕಟ್ಟಡ ಕಳೆದ 10 ವರ್ಷಗಳಿಂದ ಕುಸಿಯುತ್ತಾ ಬಂದಿದ್ದು ಸ್ಥಳೀಯರು ಕಟ್ಟಡ ತೆರವುಗೊಳಿಸುವಂತೆ ನಿರಂತರ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಈವರೆಗೆ ಆಸ್ಥೆ ವಹಿಸಿಲ್ಲ. ಕಟ್ಟಡ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡಿದೆ. ಹಿಂಭಾಗದಲ್ಲಿ ಇದಕ್ಕೆ ಹೊಂದಿಕೊಂಡಂತೆ ಅಂಗನವಾಡಿ ಕೇಂದ್ರವಿದೆ.  

Advertisement

30 ವರ್ಷಗಳ ಹಿಂದೆ ಶಾಲೆ ಸ್ಥಳಾಂತರ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಈ ಹಳೇಯ ಕಟ್ಟಡದಿಂದ ಪ್ರಸಕ್ತ ಇರುವ ಕಟ್ಟಡಕ್ಕೆ ಸ್ಥಳಾಂತರಗೊಂಡು 30 ವರ್ಷ ಕಳೆದಿದೆ. ಆದರೂ ಹಳೇ ಕಟ್ಟಡ ವಿಲೇವಾರಿ ಆಗಿಲ್ಲ.  

ಹಲವು ನಿರ್ಣಯ 
ಅಪಾಯಕಾರಿಯಾಗಿರುವ ಈ ಶಾಲೆಯ ಕಟ್ಟಡ ತೆರವು ಮಾಡುವಂತೆ ಮರ್ಣೆ ಪಂಚಾಯತ್‌ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದು ಅದರಂತೆ ಮರ್ಣೆ ಪಂಚಾಯತ್‌ ನಿರ್ಣಯ ಕೈಗೊಂಡು ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಅಲ್ಲದೆ 2015ನೇ ಸಾಲಿನಲ್ಲಿ ತಾಲೂಕು ಪಂಚಾಯತ್‌ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಗೊಂಡು ನಿರ್ಣಯ ಕೈಗೊಳ್ಳಲಾಗಿತ್ತು. ನಿರ್ಣಯದಂತೆ ಅಂದಿನ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ರವರಿಂದ ಮೌಲ್ಯ ಮಾಪನ ಮಾಡಿಸಿ ಅಕ್ಟೋಬರ್‌ 6.2016 ರಂದು ಶಿಕ್ಷಣ ಇಲಾಖೆಗೆ ಕಟ್ಟಡ ವಿಲೇವಾರಿ ಮಾಡಲು ಸೂಚಿಸಿದ್ದರು. 2016ರ ನವೆಂಬರ್‌ 2ರಂದು ಹಿಂಬರಹ ನೀಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಣ ಇಲಾಖೆಯ ನಿಯಮದಂತೆ ತೆರವುಗೊಳಿಸಲು ಸೂಚಿಸಿದ್ದರು. ಆದರೆ ಕಟ್ಟಡದ ಮೌಲ್ಯಮಾಪನದ ಜತೆಗೆ ಶಾಲಾಭಿವೃದ್ಧಿ ಸಮಿತಿಯ ನಿರ್ಣಯ ಇಲ್ಲದಿರುವುದರಿಂದ ತೆರವುಗೊಳ್ಳಲಿಲ್ಲ. ಸದ್ಯ ಕಟ್ಟಡ ಮೌಲ್ಯಮಾಪನ ಮಾಡಿ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಕಳುಹಿಸಲಾಗಿದ್ದು ಇನ್ನೂ ಪ್ರಕ್ರಿಯೆ ಹಂತದಲ್ಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next