ಕಲಬುರಗಿ: ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು.
ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು. ಅದೇ ಬೋಗಿಯಲ್ಲಿ ಕಲಬುರಗಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ತೆರಳುತ್ತಿದ್ದರು. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.
ರಾಯಚೂರು – ಗುಂತಕಲ್ ಮಾರ್ಗದಲ್ಲಿ ಗೀತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಹೆರಿಗೆ ಮಾಡಿಸಿದ್ದಾರೆ.
ತಾಯಿ ಗೀತಾ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.