ರಾಮನಗರ: 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಮನಗರ ತಾಲೂಕು ಸಮಿತಿಯ ಆಶ್ರಯದಲ್ಲಿ ಅಂಗನವಾಡಿ ನೌಕರರು ಮತ್ತು ಅಕ್ಷರದಾಸೋಹ ಕಾರ್ಯಕ್ರಮದ ಕಾರ್ಯಕರ್ತರು ನಗರದಲ್ಲಿ ಪ್ರತಿ ಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಭವನದ ಆವರಣದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ನೂತನಶಿಕ್ಷಣನೀತಿ 2020ರಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಲಕ್ಷಿಸಲಾಗಿದೆ. ಅಂಗನವಾಡಿ ಕೇಂದ್ರಗಳನ್ನು ಉಳಿಸಿಕೊಳ್ಳಬೇಕು. ನೂತನ ಶಿಕ್ಷಣ ನೀತಿ ಜಾರಿ ಮಾಡುವಾಗ ರಾಜ್ಯ ಸರ್ಕಾರ ತನ್ನ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮವನ್ನು ಬಲಪಡಿಸಬೇಕು. ಹಾಲಿ ಇರುವ ಮಾದರಿಯನ್ನೇ ಮುಂದುವರೆಸ ಬೇಕು.ಕೇಂದ್ರೀಕೃತ ಅಡುಗೆ ವ್ಯವಸ್ಥೆ ಬೇಡ,ಖಾಸಗಿ ಸಂಸ್ಥೆಗಳಿಗೆ ಅಡುಗೆ ತಯಾರಿಕೆ ಹೊಣೆಗಾರಿಕೆ ಬೇಡ ಎಂದು ಆಗ್ರಹಿಸಿದರು.
ಪರಿಗಣಿಸಿ: ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಬಿಸಿಯೂಟ ಸಿಬ್ಬಂದಿಯನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ಶಾಲೆಯಲ್ಲಿಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿ ನೇಮಕ ಮಾಡಬೇಕು. ಹಾಗೂ ನಿವೃತ್ತಿ ವೇತನ ಮತ್ತು ಆರೋಗ್ಯ ಸೌಲಭ್ಯ ವನ್ನು ಒದಗಿಸಬೇಕು. ಶಾಲೆಗಳಲ್ಲಿ ಬಿಸಿಯೂಟನೌಕರರಿಂದಲೇ ಶಾಲಾ ಸ್ವತ್ಛತೆ ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸಕೊಡಬೇಕು ಎಂದು ಒತ್ತಾಯಿಸಿದರು.
26ರಂದು ಮುಷ್ಕರ: ಅಂಗನವಾಡಿ ನೌಕರರಿಗೆ ಮಾಸಿಕ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ನೌಕರಿ ಕಾಯಂ ಮಾಡಬೇಕು. 2020 ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು.ಅಂಗನವಾಡಿ ಕೇಂದ್ರದಲ್ಲಿಯೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು. ಪ್ರಾರಂಭಿಕ ಬಾಲ್ಯವ್ಯವಸ್ಥೆಯ ಪಾಲನೆ ಮತ್ತು ಶಿಕ್ಷಣ ಯನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. 26ರಂದು ಅಖೀಲ ಭಾರತ ಮುಷ್ಕರವನ್ನು ಹಮ್ಮಿ ಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಐಸಿಡಿಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು. ರಾಜ್ಯದಲ್ಲಿ ಈಗಾಗಲೇ ನಿವೃತ್ತರಾದ ಅಂಗನವಾಡಿ ನೌಕರರಿಗೆ ಪಿಂಚಣಿ ನೀಡಬೇಕು. ಎನ್‌ಪಿಎಸ್ ವಂತಿಗೆಯನ್ನು ಶೇ.10ಕ್ಕೆ ಹೆಚ್ಚಿಸಬೇಕು ಎಂದು ಮುಷ್ಕರದಲ್ಲಿ ಸರ್ಕಾರಗಳನ್ನು ಆಗ್ರಹಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಕಾರ್ಯಕರ್ತರ ಮನವಿಯನ್ನು ಜಿಲ್ಲಾ ಪಂಚಾಯ್ತಿಯ ಉಪ ಕಾರ್ಯದರ್ಶಿ ಉಮೇಶ್ ಸ್ವೀಕರಿಸಿದರು. ತದನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಆಡಲಿತ ಸಹಾಯಕ ವೆಂಕಟಾಚಲಪತಿಯವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಲತಾ. ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಮ್ಮ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷ ರೂಪಾಬಾಯಿ, ಪ್ರಧಾನ ಕಾರ್ಯದರ್ಶಿ ಸುಧಾ, ಕರ್ನಾಟಕ ಗ್ರಾಮಪಂಚಾಯತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪರಮಶಿವಯ್ಯ, ಸಿಐಟಿಯುರಾಜ್ಯಕಾರ್ಯದರ್ಶಿ ಬಿ.ವಿ.ರಾಘವೇಂದ್ರ ಭಾಗವಹಿಸಿದ್ದರು.