Advertisement

ಬಂಟಕಲ್ಲು ಅಂಗನವಾಡಿ ಕೇಂದ್ರ ಹವಾನಿಯಂತ್ರಿತ : ಜಿಲ್ಲೆಯ ಮೊದಲ ಸಾಧನೆ

12:09 PM Mar 17, 2022 | Team Udayavani |

ಶಿರ್ವ : ಮಹಿಳಾ , ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್‌ಸ್ಪರ್ಶವಿರುವ ಜಿಲ್ಲೆಯ ಮೊದಲ ಹವಾನಿಯಂತ್ರಿತ ಅಂಗನವಾಡಿ ಕೇಂದ್ರವು ಕಾಪು ತಾ| ಶಿರ್ವ ಗ್ರಾ.ಪಂ. ವ್ಯಾಪ್ತಿಯ ಬಂಟಕಲ್ಲಿನಲ್ಲಿ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

Advertisement

ದಿ| ಅಚ್ಯುತ ಕಾಮತ್‌ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ 6 ಸೆಂಟ್ಸ್‌ ಜಾಗದಲ್ಲಿ ತೀರಾ ದುಸ್ಥಿತಿಯ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿ ಬಗ್ಗೆ ಗ್ರಾಮಸಭೆ, ವಾರ್ಡ್‌ ಸಭೆ, ಕೆಡಿಪಿ ಸಭೆಗಳಲ್ಲಿ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಅಂದು ಗ್ರಾ.ಪಂ.ಸದಸ್ಯರಾಗಿದ್ದ ಕೆ.ಆರ್‌.ಪಾಟ್ಕರ್‌ ಅವರ ಸತತ 6 ವರ್ಷಗಳ ಪರಿಶ್ರಮದಿಂದ ಅಂಗನ ವಾಡಿ ಕೇಂದ್ರಕ್ಕೆ ಇದೀಗ ಹೊಸ ಕಟ್ಟಡ ದೊಂದಿಗೆ ಆಧುನಿಕ ಸ್ಪರ್ಶ ದೊರೆತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 16.5 ಲ. ರೂ.ಗಳಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ತನ್ನ ಸ್ನೇಹಿತರು, ಪರಿಸರದ ಸಂಘಸಂಸ್ಥೆಗಳು ಹಾಗೂ ವಾಟ್ಸಾéಪ್‌ ಸಂದೇಶಕ್ಕೆ ಸ್ಪಂದಿಸಿದ ದಾನಿಗಳ ಸಹಕಾರದಿಂದ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಸುಮಾರು 4 ಲ.ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೈಟೆಕ್‌ ಸ್ಪರ್ಶ ನೀಡಿದ್ದಾರೆ.

ಸಂಘ ಸಂಸ್ಥೆಗಳಾದ ಬಂಟಕಲ್ಲು ನಾಗರಿಕ ಸೇವಾ ಸಮಿತಿ, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ, ಲಯನ್ಸ್‌ ಕ್ಲಬ್‌ ಬಂಟಕಲ್ಲು -ಬಿಸಿ ರೋಡ್‌, ಲಯನ್ಸ್‌ ಕ್ಲಬ್‌ ಬಂಟಕಲ್ಲು ಜಾಸ್ಮಿನ್‌, ಲಯನ್ಸ್‌ ಕ್ಲಬ್‌ ಉಡುಪಿ-ಕರಾವಳಿ, ರೋಟರಿ ಕ್ಲಬ್‌ ಶಿರ್ವ, ಸ್ತ್ರೀಶಕ್ತಿ ಸಂಘ ಮತ್ತು ಇತರ ದಾನಿಗಳು ಸಹಕರಿಸಿದ್ದಾರೆ.

ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿನಯಾ ಹರೀಶ್‌ ಕುಂದರ್‌, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿಯಾಗಿ ಶೈಲಾ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಹವಾನಿಯಂತ್ರಿತ ಅಂಗನವಾಡಿ ಕೇಂದ್ರವನ್ನು ಮಾ. 20ರಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಉದ್ಘಾಟಿಸಲಿದ್ದಾರೆ. ವಿವಿಧ ಜನ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮತ್ತು ದಾನಿಗಳಿಗೆ ಸಮ್ಮಾನ ನಡೆಯಲಿದೆ.

ಇದನ್ನೂ ಓದಿ : ಉದ್ಯಾವರ: ರೈಲಿನಡಿಗೆ ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಗುರುತು ಪತ್ತೆ

ಏನೆಲ್ಲ ಇದೆ?
ಅಂಗನವಾಡಿ ಸುತ್ತಲೂ ಆವರಣ ಗೋಡೆ, ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಗೋಡೆ ಬರಹ, ಕಾಟೂìನ್‌ ಚಿತ್ರಗಳು, ಕೇಬಲ್‌ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾಟೂìನ್‌ ನೆಟ್‌ವರ್ಕ್‌ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್‌ಲಾಕ್‌, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್‌ ಬೆಂಚುಗಳು, ಎರ‌ಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್‌ ಪ್ಯೂರಿಫೈಯರ್‌, ಸೋಫಾ, ಚಪ್ಪಲ್‌ ಸ್ಟಾಂಡ್‌, ಬ್ಯಾಗ್‌ ಸ್ಟಾಂಡ್‌, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್‌ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್‌ವಿದ್ಯುತ್‌ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾನೈಟ್‌ ಹೊದಿಕೆಯ ಅಡುಗೆ ಕೋಣೆಯೊಂದಿಗೆ ಗೆùಂಡರ್‌ ಮತ್ತು ಗ್ಯಾಸ್‌ ಸ್ಟೌ ಸೌಲಭ್ಯ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರ ತೋಟ ರಚನೆಯೊಂದಿಗೆ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ.

ಪರಿಶ್ರಮಕ್ಕೆ ತಕ್ಕ ಪ್ರತಿಫಲ
ಜೀರ್ಣಾವಸ್ಥೆಯಲ್ಲಿದ್ದ ಅಂಗನವಾಡಿ ಕೇಂದ್ರದ ನಿರ್ಮಾಣದ ಬಗ್ಗೆ ಕಳೆದ 6 ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದು, ಸರಕಾರಕ್ಕೆ ಪತ್ರ ಬರೆದು ಒತ್ತಡ ತರಲಾಗಿತ್ತು. ಪಿಡಿಒ ಅನಂತ ಪ ದ್ಮ ನಾಭ ನಾಯಕ್‌, ವಿವಿಧ ಇಲಾ ಖಾಧಿ ಕಾ ರಿ ಗಳು, ದಾನಿಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದ್ದು ಸಂತಸ ತಂದಿದೆ.
– ಕೆ.ಆರ್‌. ಪಾಟ್ಕರ್‌, ಅಧ್ಯಕ್ಷ, ಶಿರ್ವ ಗ್ರಾ.ಪಂ.

ಶಿಶು ಸ್ನೇಹಿ ಪರಿಕಲ್ಪನೆ
ಸರಕಾರದ ಪೂರಕ ಅಂದಾಜು ಅನುದಾನದಡಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಸರಕಾರದ ನಿರ್ದೇಶನದಂತೆ ಶಿರ್ವ ಗ್ರಾ.ಪಂ.ನ ವಿಶೇಷ ಕಾಳಜಿಯಿಂದ ಶಿಶು ಸ್ನೇಹಿ ಪರಿಕಲ್ಪನೆಯೊಂದಿಗೆ ನಿರ್ಮಿಸಲಾಗಿದೆ.
– ವೀಣಾ ವಿವೇಕಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ

– ಸತೀಶ್ಚಂದ್ರ ಶೆಟ್ಟಿ ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next