ಮೈಸೂರು: ಪಡಿತರ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯ ಪಡೆಯಲು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲೂ ಪಡಿತರ ಕೂಪನ್ ಪಡೆಯಬಹುದು. ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದರು.
ನಗರದಲ್ಲಿ ಭಾನುವಾರ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ಕೊಡುವ ವ್ಯವಸ್ಥೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ ನ್ಯಾಯಬೆಲೆ ಅಂಗಡಿ ಗಳಲ್ಲಿ ಮಾತ್ರ ಕೂಪನ್ ವಿತರಣೆ ಮಾಡ ಲಾಗುವುದು. ಮಾರ್ಚ್, ಏಪ್ರಿಲ್ ತಿಂಗಳಿ ನಲ್ಲಿ ಗ್ರಾಮೀಣ ಪ್ರದೇಶಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದರು.
ಖಾಸಗಿ ಸೇವಾ ಕೇಂದ್ರಗಳಲ್ಲಿ ಕೂಪನ್ ಪಡೆಯುವ ಹಾಗೂ ಆಧಾರ್ ಸಂಖ್ಯೆ ಜೋಡಣೆ ಮಾಡಿರುವ ಮೊಬೈಲ್ ಮೂಲಕ 161ಗೆ ಡಯಲ್ ಮಾಡಿ ಪಡಿತರ ಹಂಚಿಕೆಯ ಕೋಡ್ ಸಂಖ್ಯೆ ಪಡೆದು ಕೊಳ್ಳುವ ವ್ಯವಸ್ಥೆ ಕೂಡ ಮುಂದು ವರಿಯಲಿದೆ. ಆದರೆ, ಸೂಕ್ತ ಪ್ರಚಾರದ ಕೊರತೆಯಿಂದ ಮೊಬೈಲ್ ಮೂಲಕ ಪಡಿತರ ಹಂಚಿಕೆಯ ಕೋಡ್ ಸಂಖ್ಯೆ ಪಡೆಯುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಹೇಳಿದರು.
ರಾಜ್ಯದ 20 ಸಾವಿರ ನ್ಯಾಯಬೆಲೆ ಅಂಗಡಿಗಳ ಪೈಕಿ 6 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ಪದ್ಧತಿ ಜಾರಿಗೆ ತಂದ ನಂತರ ಕಳೆದ ಮೂರು ತಿಂಗಳಲ್ಲಿ ಗಮನಿಸಿದಂತೆ ಶೇಕಡ 15ರಷ್ಟು ಆಹಾರ ಧಾನ್ಯ ಉಳಿತಾಯವಾಗಿದೆ. ಈಗಾಗಲೇ ಪಡಿತರ ಕೂಪನ್ ಪಡೆದು, ಆಹಾರ ಧಾನ್ಯ ದೊರೆಯದಿರುವವರಿಗೆ ಯಾವುದೇ ಆತಂಕ ಬೇಡ. ಕೂಪನ್ ಪಡೆದಿರುವ ಎಲ್ಲರ ಆಹಾರ ಧಾನ್ಯ ಸುರಕ್ಷಿತವಾಗಿದ್ದು, ವಿಳಂಬ ಆಗಿರುವ ಕಡೆಗಳಲ್ಲಿ ಫೆ.5ರವರೆಗೂ ಪಡಿತರ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ವಿತರಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶೇ. 100ರಷ್ಟು ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದ್ದು, ಇದರಿಂದ ಸುಮಾರು 65 ಲಕ್ಷ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಹಚ್ಚಲಾಗಿದೆ. ಹೀಗಾಗಿ ಸದಸ್ಯ ರಾಜ್ಯದ ಪಡಿತರ ಚೀಟಿದಾರರ ಸಂಖ್ಯೆ 3.45 ಕೋಟಿ ಇದೆ. ಈಗಲೂ ಕೂಡ ಆಧಾರ್ ಜೋಡಣೆ ಮಾಡಿ, ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ಕೇಂದ್ರದ ಉಜ್ವಲ್ ಯೋಜನೆಗೆ ರಾಜ್ಯದಲ್ಲಿ 2.25 ಲಕ್ಷ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರ ಯೋಜನೆಗೆ ಚಾಲನೆ ಕೊಟ್ಟಲ್ಲಿ, ಫಲಾನುಭವಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಉಚಿತವಾಗಿ ದೊರೆಯಲಿದ್ದು, ರಾಜ್ಯ ಸರ್ಕಾರ ಅಡುಗೆ ಒಲೆಯನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.
ಅಡುಗೆ ಅನಿಲ ಸಂಪರ್ಕ ಹೊಂದಿರುವ ಕುಟುಂಬಗಳಿಗೆ ಪಡಿತರ ವಿತರಣಾ ವ್ಯವಸ್ಥೆಯಡಿ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಕೊಡುವ ವ್ಯವಸ್ಥೆ ರದ್ದು ಮಾಡಲಾಗುತ್ತಿದೆ. ಸಬ್ಸಿಡಿ ದರದ ಪಡಿತರ ಸೀಮೆಎಣ್ಣೆಯ ಸೋರಿಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದ್ದು, ಬೇರೆ ಉದ್ದೇಶಕ್ಕೆ ಬೇಕಿದ್ದಲ್ಲಿ ಸಬ್ಸಿಡಿಯೇತರ ಬಿಳಿ ಸೀಮೆಎಣ್ಣೆಯನ್ನು ಖರೀದಿಸಬಹುದು ಎಂದರು. ಜಿಲ್ಲಾಧಿಕಾರಿ ಡಿ. ರಂದೀಪ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.