Advertisement

ರಕ್ತಹೀನತೆ- ಅಪೌಷ್ಟಿಕತೆಯಿಂದ 1 ಲಕ್ಷ ತಾಯಂದಿರ ಸಾವು

01:46 PM Sep 29, 2018 | Team Udayavani |

ಚಿತ್ರದುರ್ಗ: ದೇಶದಲ್ಲಿ ರಕ್ತ ಹೀನತೆ, ಅಪೌಷ್ಟಿಕತೆಯಿಂದಾಗಿ ಹೆರಿಗೆ ಸಂದರ್ಭದಲ್ಲಿ 1ಲಕ್ಷ ತಾಯಂದಿರು ಸಾವು ಕಾಣುತ್ತಿದ್ದು, ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಸಿ.ಎಲ್‌.ಪಾಲಾಕ್ಷ ಕರೆ ನೀಡಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 30-65 ವರ್ಷದೊಳಗಿನ ಮಹಿಳೆಯರ ವಿಶೇಷ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ, ರಕ್ತ ಹೀನತೆಯಿಂದ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದರು. 

ಪುರುಷರು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮುಂದೆ ಬಂದರೂ ನನ್ನ ಪತಿ, ದುಡಿಯುವ ಮನುಷ್ಯ ಆರೋಗ್ಯವಾಗಿರಲಿ ಎಂದು ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಮಹಿಳೆಯರೇ ಒಪ್ಪುತ್ತಿಲ್ಲ. ಬದಲಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಮಹಿಳೆಯರೇ
ಮಾಡಿಸಿಕೊಳ್ಳುತ್ತಿರುವುದು ದುರಂತವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರು ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಆರಂಭದಲ್ಲೇ ರೋಗ ಪತ್ತೆಯಾದರೆ ಶೇ.90ರಷ್ಟು ಸಾವು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಿದೆ. ಆದರೆ ಸಾಕಷ್ಟು ಮಹಿಳೆಯರು ತಮ್ಮಲ್ಲಿನ ರೋಗಗಳ ಬಗ್ಗೆ ಮುಕ್ತವಾಗಿ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರ ಬಳಿ ಮಹಿಳೆಯರು ಮುಕ್ತವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು
ಹೇಳಿಕೊಳ್ಳಬಹುದು. ಇದರಿಂದ ಅಮೂಲ್ಯ ಜೀವ ಉಳಿಸಲು ಸಹಾಯವಾಗಲಿದೆ. ಗರ್ಭ ಚೀಲದ ಸಮಸ್ಯೆಯಿಂದ ದೇಶದಲ್ಲಿ ಪ್ರತಿವರ್ಷ 77 ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಇಂತಹ ಎಲ್ಲ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಿದೆ
ಎಂದು ತಿಳಿಸಿದರು.

Advertisement

ರಾಜ್ಯದಲ್ಲೇ ಪ್ರಥಮವಾಗಿ ಚಿತ್ರದುರ್ಗ ಆರೋಗ್ಯ ಇಲಾಖೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದು, 30 ರಿಂದ 65 ವರ್ಷದೊಳಗಿನ ಮಹಿಳೆಯರ ಆರೋಗ್ಯ ಸಮಸ್ಯೆಗಳ ಸಮೀಕ್ಷೆ ಮಾಡಲಾಗುತ್ತಿದೆ. ಈ ಸಮೀಕ್ಷೆಯ ಪ್ರಕಾರ ಚಿತ್ರದುರ್ಗ ತಾಲೂಕಿನ 20 ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ 97204 ಮನೆಗಳ ಸಮೀಕ್ಷೆಯಲ್ಲಿ 4,41,437 ಮಂದಿ ಭೇಟಿ ಮಾಡಲಾಗಿದೆ. ಈ ಪೈಕಿ 30-65 ವರ್ಷದೊಳಗಿನ 61,228 ಮಹಿಳೆಯರ ಪತ್ತೆ ಮಾಡಿ ಅವರಲ್ಲಿ ಹಲವು ರೋಗಗಳನ್ನು ಗುರುತಿಸಲಾಗಿದೆ.

ವಿವಿಧ ಕಾಯಿಲೆಗಳಿಂದ 2424 ಮಹಿಳೆಯರು ನರಳುತ್ತಿದ್ದಾರೆ. 305 ಬಿಳಿ ಮುಟ್ಟಿನ ಸಮಸ್ಯೆ, 258 ಮುಟ್ಟಿನ ತೊಂದರೆ, 393 ಗರ್ಭಕೋಶ ತೊಂದರೆ, 259 ಕಿಬ್ಬೊಟ್ಟೆ ನೋವು ರೋಗದಿಂದ ನರಳುತ್ತಿದ್ದಾರೆ. ಅಲ್ಲದೇ ಇನ್ನು ಬಹಳಷ್ಟು ಮಂದಿ ಮಹಿಳೆಯರು ಮುಕ್ತವಾಗಿ ತಮ್ಮಲ್ಲಿನ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್‌ ಮಾತನಾಡಿ, 30-65 ವರ್ಷದೊಳಗಿನ ಮಹಿಳೆಯರಲ್ಲಿ ಕಾಡುತ್ತಿರುವ ರೋಗ ಸಮಸ್ಯೆಗಳಿಗೆ ಜಿಲ್ಲಾಡಳಿತ ಯಾವ ರೀತಿಯ ಪರಿಹಾರ ಮಾಡಲು ಸಾಧ್ಯವಿದೆ ಎನ್ನುವ ಪೂರ್ವಭಾವಿ ಸಭೆ ಕರೆಯಲಾಗಿದೆ. ಜಿಲ್ಲಾ ಪಂಚಾಯತ್‌ ವತಿಯಿಂದ ರೋಗದಿಂದ ನರಳುತ್ತಿರುವ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಜಿಪಂ ಸದಸ್ಯರಾದ ನರಸಿಂಹರಾಜು, ಕೆ.ಟಿ.ಗುರುಮೂರ್ತಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಕೇಂದ್ರದ ಡಾ| ಕಂಬಾಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌.ಮಂಜುನಾಥ್‌, ಸಹಾಯಕ ಆರೋಗ್ಯ ಶಿಕ್ಷಣಾಧಿಕಾರಿ ಖಾಸಿಂ ಸಾಬ್‌ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next