Advertisement

ಆನೇಕಲ್‌ ಪುರಸಭೆ ಮತದಾರರ ಪಟ್ಟಿಯಲ್ಲಿ ಅಕ್ರಮ 

07:28 AM Feb 13, 2019 | |

ಆನೇಕಲ್‌: ಆನೇಕಲ್‌ ಪುರಸಭೆಯ 2019ರ ಚುನಾವಣಾ ಪಟ್ಟಿಯಲ್ಲಿ ಅಕ್ರಮವಾಗಿ ಪೂರಕ ಮತದಾರರ ಪಟ್ಟಿ ತಯಾರಿಸುವುದನ್ನು ಖಂಡಿಸಿ ಸ್ಥಳೀಯರು ಪುರಸಭೆ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ಎಂ.ರಾಮಕೃಷ್ಣ ಹಾಗೂ ಪ್ರಜಾ ವಿಮೋಚನಾ ಚಳವಳಿ ನೇತೃತ್ವದಲ್ಲಿ ಸಾವಿರಾರು ಜನರು ಪುರಸಭೆ ಎದುರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸ್ವಾರ್ಥಕ್ಕಾಗಿ ಮತದಾರ ಪಟ್ಟಿಯಲ್ಲಿ ಲೋಪ: ಪುರಸಭಾ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, 2019ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಹಿಂದೆ 23 ವಾರ್ಡ್‌ಗಳಿದ್ದವು. 2011ರ ಜನಗಣತಿ ಅನುಸಾರವಾಗಿ ಕ್ಷೇತ್ರ ಪುನರ್‌ ವಿಂಗಡನೆಯಾಗಿ ಈಗ 27 ವಾರ್ಡ್‌ಗಳಾಗಿ ವಿಂಗಡಣೆ ಮಾಡಲಾಗಿದೆ.

ವಿಧಾನಸಭಾ ಚುನಾವಣೆ ಮತಗಟ್ಟೆಗಳ ಮತದಾರ ಪಟ್ಟಿ ಸರಿಯಾಗಿತ್ತು. ಆದರೆ, ಚುನಾವಣೆಯ ಮತದಾರರ ಪಟ್ಟಿಯಲ್ಲಿ ಕೆಲವು ಪಟ್ಟಭದ್ರ ರಾಜಕಾರಣಿಗಳು ಸೋಲು, ಗೆಲುವಿನ ಲೆಕ್ಕಾಚಾರದಿಂದ ತಮ್ಮ ಸ್ವಾರ್ಥಕ್ಕಾಗಿ ವಾರ್ಡ್‌ಗಳ ಮೂಲಕ ಮತದಾರ ಪಟ್ಟಿಯಲ್ಲಿ ಲೋಪಗಳನ್ನು ಮಾಡಿದ್ದಾರೆ ಎಂದು ದೂರಿದರು.

ದೂರು ನೀಡಿದ್ದರೂ ಕ್ರಮವಿಲ್ಲ: ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ತಿದ್ದುಪಡಿ, ಸೇರ್ಪಡೆ ಹಾಗೂ ಫಾರ್ಮ್ ನಂಬರ್‌ 6 ಮತ್ತು 8 ಎ ಅರ್ಜಿಗಳನ್ನು ಮಾನ್ಯ ಮಾಡದೇ, ಕೆಲವು ರಾಜಕಾರಣಿಗಳ ಒತ್ತಡಕ್ಕೆ ಮಣಿದು ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ ಸೇರಿಸದೇ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು. 

ಅಧಿಕಾರಿಗಳ ವರ್ಗಾವಣೆ ಮಾಡಿ: ಮತದಾರರ ಪಟ್ಟಿಯಲ್ಲಿನ ಗೊಂದಲಗಳಿಗೆ ಸ್ಥಳೀಯ ಪುರಸಭೆ ಅಧಿಕಾರಿಗಳು ಕಾರಣರಾಗಿದ್ದು, ಕಚೇರಿಯಲ್ಲಿ ಕುಳಿತು ಮತದಾರರ ಪಟ್ಟಿಯನ್ನು ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗಿವೆ. ಹಾಗಾಗಿ, ಇಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಸರಿಯಾಗಿ ಕಾರ್ಯ ನಿರ್ವಸುವ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಆಗ್ರಸಿದರು.

Advertisement

ಉಗ್ರ ಹೋರಾಟದ ಎಚ್ಚರಿಕೆ: ಪ್ರಜಾ ವಿಮೋಚನಾ ಚಳವಳಿ ಸಮತವಾದ ಸಂಘಟನೆ ರಾಜ್ಯಾಧ್ಯಕ್ಷ ಇಂಡ್ಲವಾಡಿ ಬಸವರಾಜು ಮಾತನಾಡಿ, ಪುರಸಭೆೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದೆ. ಮುಂದಿನ ಪುರಸಭಾ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ಇಲ್ಲದೇ ಎಲ್ಲೆಂದರಲ್ಲಿ ಮತದಾರರನ್ನು ಸೇರಿಸಿರುವುದು ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಸರಿಪಡಿದೇ ಇದ್ದರೆ ಎಂಟು ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಬಹಾದ್ದೂರ್‌ಪುರದ ಹೊಸೂರು ಮುಖ್ಯ ರಸ್ತೆಯಿಂದ ತಮಟೆ ಬಾರಿಸುತ್ತ ಸಾವಿರಾರು ಜನರು ತಾಲೂಕು ಕಚೇರಿ ವರೆಗೆ ತಮಟೆ ಚಳವಳಿ ನಡೆಸಿ, ಪುರಸಭೆ ಎದುರು ಪ್ರತಿಭಟನೆ ನಡೆಸಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಮಹದೇವಯ್ಯ, ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಮಾಹಿತಿ ನೀಡುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಪಿವಿಸಿ(ಎಸ್‌)ಸಂಘಟನೆ ರಾಜ್ಯ ಕಾರ್ಯದರ್ಶಿ ಭವಾನಿ ಪ್ರಸಾದ್‌, ಮುಖಂಡರಾದ ಮಾದೇಶ್‌, ಆದೂರು ಲೋಕೇಶ್‌, ಕಾವೇರಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್‌, ಪುರಸಭಾ ಸದಸ್ಯ ನರಸಿಂಹರೆಡ್ಡಿ ಮತ್ತಿರರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next