ತೆಕ್ಕಟ್ಟೆ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಸನ್ನಿಧಿಯಲ್ಲಿ ಸುಮಾರು 21 ಸಾವಿರ ತೆಂಗಿನಕಾಯಿಯ ಮೂಡುಗಣಪತಿ ಸೇವೆಯನ್ನು ಅಮೇರಿಕಾದ ಮೇಜರ್ ಡಾ| ಪ್ರವರ್ಧನ್ ಬಿರ್ತಿ ಹಾಗೂ ವಂದನಾ ಬಿರ್ತಿ ದಂಪತಿಗಳು ಡಿ.24 ರಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇತಿಹಾಸ : ಕಳೆದ ಹದಿನೈದು ದಿನಗಳಿಂದಲೂ ಮೂಡುಗಣಪತಿ ಸೇವೆಗಾಗಿ ಸುಮಾರು 21 ಸಾವಿರ ತೆಂಗಿನ ಕಾಯಿ ಸಂಗ್ರಹ ಹಾಗೂ ಅದಕ್ಕೆ ಪೂರಕವಾದ ಇತರೆ ತಯಾರಿಗಳು ದೇವಳದಲ್ಲಿ ನಿರಂತರವಾಗಿ ನಡೆದಿದೆ. ಸುಮಾರು 21 ಸಾವಿರ ಕಾಯಿಯ ವೆಚ್ಚವೇ ಸರಿ ಸುಮಾರು ರೂಪಾಯಿ 5ಲಕ್ಷಕ್ಕೂ ಅಧಿಕವಾಗಿದೆ. ಸುಮಾರು 21 ಬಾಳೆಗೊನೆ, 21 ಕಟ್ಟು ವೀಳ್ಯದೆಲೆ, 900 ಅಡಿಕೆ , ಹೂ ಹಣ್ಣು ಸೇರಿದಂತೆ ಇತರೆ ಖರ್ಚುಗಳು ಸರಿ ಸುಮಾರು ಲಕ್ಷಕ್ಕೂ ಅಧಿಕ ಮೊತ್ತ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶೇಷವಾಗಿ ನಡೆದ ಧಾರ್ಮಿಕ ಕಾರ್ಯಕ್ರಮ ನೋಡುವುದೇ ಒಂದು ಸೌಭಾಗ್ಯ.
ಸತತ 3 ಗಂಟೆಗಳ ಕಾಲ ತೆಂಗಿನಕಾಯಿ ಒಡೆಯುವ ಕಾರ್ಯ : ಸಾವಿರಾರು ತೆಂಗಿನ ಕಾಯಿಯನ್ನು ಒಡೆಯಲು ಪರಿಸರದ ನುರಿತ 20ಕ್ಕೂ ಅಧಿಕ ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡು ಕೇವಲ 3 ಗಂಟೆಯ ಅವಧಿಯಲ್ಲಿ ತೆಂಗಿನ ಕಾಯಿ ಒಡೆಯುವ ಕಾರ್ಯವನ್ನು ಪೂರ್ಣಗೊಳಿಸಿರುವುದು ವಿಶೇಷ.
ಸಂಕಷ್ಟ ಹರ : ಈ ಹಿಂದೆ ಸೇವಾಕರ್ತ ಅಮೇರಿಕಾದ ಮೇಜರ್ ಡಾ| ಪ್ರವರ್ಧನ್ ಬಿರ್ತಿ ಹಾಗೂ ವಂದನಾ ಬಿರ್ತಿ ದಂಪತಿಗಳು 21 ಸಾವಿರ ತೆಂಗಿನಕಾಯಿಯ ಮೂಡುಗಣಪತಿ ಸೇವೆಯನ್ನು ನೀಡಿದ್ದು ಅದರಿಂದ ಯಶಸ್ಸನ್ನು ಕಂಡಿದ್ದಾರೆ. ಶ್ರೀ ದೇವರು ದೃಷ್ಟಿಯಿಂದ ಸ್ವೀಕಾರ ಮಾಡುವ ಸೇವೆ ಇದಾಗಿರುವುದರಿಂದ ಈ ಬಾರಿ ಸುಮಾರು 21 ಸಾವಿರ ತೆಂಗಿನಕಾಯಿಯ ಮೂಡುಗಣಪತಿ ಸೇವೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ತೆಂಗಿನಕಾಯಿ ಭಕ್ತರಿಗೆ ವಿತರಣೆ : ಶ್ರೀ ದೇವರಿಗೆ ಪೂಜೆ ಸಲ್ಲಿಸಿದ ತೆಂಗಿನಕಾಯಿಯನ್ನು ದೇವಳಕ್ಕೆ ಆಗಮಿಸಿದ ಭಕ್ತರಿಗೆ ವಿತರಿಸಲಾಗುತ್ತಿದ್ದು ಉಳಿದಿರುವ ತೆಂಗಿನಕಾಯಿಯನ್ನು ಸೇವಾ ಕಾರ್ಯಕ್ಕೆ ವಿನಿಯೋಗಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ , ಕೆ.ಶ್ರೀಧರ ಉಪಾಧ್ಯಾಯ, ಮೆನೇಜರ್ ನಟೇಶ್ ಕಾರಂತ್ ತೆಕ್ಕಟ್ಟೆ,ಪರ್ಯಾಯ ಅರ್ಚಕ ಚಂದ್ರಕಾಂತ್ ಉಪಾಧ್ಯಾಯ, ದೇವಳದ ಅರ್ಚಕರು ಮತ್ತು ಸಿಬಂದಿ ವರ್ಗ ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.