ತೆಕ್ಕಟ್ಟೆ: ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗ ವಿಶೇಷ ಪೂಜೆಯೊಂದಿಗೆ ಸೆ.7ರ ಶನಿವಾರ ಸಂಭ್ರಮದಿಂದ ಜರಗಿತು.
ಶ್ರೀ ದೇವಳವು ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಈ ಸಂದರ್ಭದಲ್ಲಿ ನಂಬಿದ ಸಹಸ್ರಾರು ಭಕ್ತರು ಶ್ರೀ ಸನ್ನಿಧಿಯಲ್ಲಿ ನೆರೆದಿದ್ದರು.
ಹರಿದು ಬಂದ ಭಕ್ತ ಸಮೂಹ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿಯಂದು ಸಹಸ್ರಾರು ಭಕ್ತರು ಮುಂಜಾನೆಯಿಂದಲೂ ಶ್ರೀ ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಈ ಬಾರಿ ಸಂಭ್ರಮದ ಶ್ರೀ ವಿನಾಯಕ ಚತುರ್ಥಿಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸುಮಾರು 5೦ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರೀಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದು, ಸುಮಾರು 9 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.
ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ : ಪೊಲೀಸ್ ಇಂಟೆಲಿಜೆನ್ಸ್ ವಿಭಾಗದ ಸೂಚನೆಯ ಮೇರೆಗೆ ದೇವಸ್ಥಾನದ ಅತಿ ಸಮೀಪಕ್ಕೆ ಯಾವ ವಾಹನಗಳಿಗೂ ಅವಕಾಶ ನೀಡದೇ, ವಾಹನಗಳ ನಿಲುಗಡೆಗಾಗಿಯೇ ದೇವಳದ ಉತ್ತರ ದಿಕ್ಕಿನಲ್ಲಿ ಸುಸಜ್ಜಿತವಾದ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರಿಗೆ ವಿವಿಧ ಬಗೆಯ ಪ್ರಸಾದ ವಿತರಣೆ: ಪರ್ಯಾಯ ಅರ್ಚಕರು ಶ್ರೀದೇವರಿಗೆ 21 ಬಗೆಯ ಖಾದ್ಯಗಳನ್ನು ಸಮರ್ಪಿಸುವುದರಿಂದ ಭಕ್ತರಿಗೆ ಬೆಳಗ್ಗೆಯಿಂದ ಸಂಜೆ ತನಕ ವಿವಿಧ ಪ್ರಸಾದಗಳನ್ನು ವಿತರಿಸಲಾಗುವುದು.
ವಿಶೇಷ ಭದ್ರತೆ : ಶ್ರೀ ವಿನಾಯಕ ಚತುರ್ಥಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೇವಳದಲ್ಲಿ ವಿಶೇಷವಾಗಿ ಸಿಸಿ ಕೆಮರಾಗಳ ಕಣ್ಗಾವಲಿರಿಸಿದ್ದು, ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಸಂದಭದಲ್ಲಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ‘ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಹಿರಿಯ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿ ಕೆ.ನಿರಂಜನ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.