ಸೈಂಟ್ ಲೂಸಿಯಾ: ಮುಂದಿನ ತಿಂಗಳ ಅಂತ್ಯದಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ತನ್ನ ತಂಡ ಪ್ರಕಟ ಮಾಡಿದೆ. ಬಹು ಸಮಯದ ನಂತರ ಪವರ್ ಹಿಟ್ಟರ್ ಆಂದ್ರೆ ರಸ್ಸೆಲ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಗುರುವಾರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 15 ಸದಸ್ಯರ ವಿಶ್ವಕಪ್ ಪ್ರಾಥಮಿಕ ತಂಡವನ್ನು ಪ್ರಕಟ ಮಾಡಿದೆ. ವಿಶ್ವಕಪ್ ನಂತರ ವಿದಾಯ ಹೊಂದುವುದಾಗಿ ಘೋಷಿಸಿರುವ ಕ್ರಿಸ್ ಗೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಾಯ್ ಹೋಪ್ ಜೊತೆ ನಿಕೋಲಸ್ ಪೂರನ್ ವಿಕೆಟ್ ಕೀಪರ್ ಗಳಾಗಿ ಆಯ್ಕೆಯಾಗಿದ್ದಾರೆ. ಆದರೆ ಆಲ್ ರೌಂಡರ್ ಕೈರನ್ ಪೊಲಾರ್ಡ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆಂದ್ರೆ ರಸ್ಸೆಲ್ ಐಪಿಎಲ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದು 2018ರ ಸ್ಟ್ರೈಕ್ ರೇಟ್ ನಲ್ಲಿ 392 ರನ್ ಗಳಿಸಿದ್ದಾರೆ. ಈ ಬ್ಯಾಟಿಂಗ್ ಸಾಹಸವೇ ರಸ್ಸೆಲ್ ಆಯ್ಕೆಗೆ ಮೂಲ ಕಾರಣ ಎನ್ನಲಾಗಿದೆ.
ಆಶ್ಲೇ ನರ್ಸ್ ಜೊತೆಗೆ ಅರೆಕಾಲಿಕ ಸ್ಪಿನ್ನರ್ ಆಗಿ ಫಾಬಿಯನ್ ಅಲೆನ್ ಆಯ್ಕೆಯಾಗಿದ್ದಾರೆ. ಸುನೀಲ್ ನರೈನ್ ಆಯ್ಕೆಯಾಗುವ ಅವಕಾಶವಿದ್ದರೂ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದರಿಂದ ಪ್ರತೀ ಐಪಿಎಲ್ ಪಂದ್ಯದ ನಂತರ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಏಕದಿನ ಪಂದ್ಯದಲ್ಲಿ 10 ಓವರ್ ಬೌಲಿಂಗ್ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ನರೈನ್ ಆಯ್ಕೆ ಮಾಡಲಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರೋಬರ್ಟ್ ಹೈನ್ಸ್ ಮಾಹಿತಿ ನೀಡಿದ್ದಾರೆ.
ವೆಸ್ಟ್ ಇಂಡೀಸ್ ತಂಡ
ಜೇಸನ್ ಹೋಲ್ಡರ್ (ನಾಯಕ), ಆಂದ್ರೆ ರಸ್ಸೆಲ್, ಆಶ್ಲೇ ನರ್ಸ್, ಕಾರ್ಲೋಸ್ ಬ್ರಾತ್ ವೇಟ್, ಕ್ರಿಸ್ ಗೇಲ್, ಡ್ಯಾರೆನ್ ಬ್ರಾವೋ, ಇವಿನ್ ಲೂಯಿಸ್, ಫಾಬಿನ್ ಅಲೆನ್, ಕೆಮಾರ್ ರೋಚ್, ನಿಕೋಲಸ್ ಪೂರನ್, ಓಶಾನೆ ಥೋಮಸ್, ಶಾಯಿ ಹೋಪ್, ಶಾನನ್ ಗ್ಯಾಬ್ರಿಯಲ್, ಶೆಲ್ಡನ್ ಕ್ಯಾಟ್ರಲ್, ಶಿಮ್ರನ್ ಹೆತ್ಮೈರ್.