Advertisement
ನಾಲ್ಕೂ ರಾಜ್ಯಗಳಲ್ಲಿ ಜನಜೀವನವು ಅಸ್ತವ್ಯಸ್ತವಾಗಿದ್ದು, ವರುಣನ ಅಬ್ಬರವು ಹಲವೆಡೆ ದಿಢೀರ್ ಪ್ರವಾಹ, ಪ್ರಾಣಹಾನಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಉಂಟುಮಾಡಿದೆ. ರಾಜ್ಯ ದಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಉಂಟಾದ ಅವಘಡ ಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರವೂ ಮಳೆ ಸಂಬಂಧಿ ಘಟನೆಗಳಿಂದ 6 ಮಂದಿ ಮೃತ ಪಟ್ಟಿದ್ದರು. ಆಂಧ್ರದಲ್ಲಿ ಮಳೆ ಕೋಲಾಹಲ ಸೃಷ್ಟಿಸಿದೆ. ಪ್ರತ್ಯೇಕ ದುರಂತಗಳಲ್ಲಿ 30 ಮಂದಿ ಸಾವನ್ನ ಪ್ಪಿದ್ದು, 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
Related Articles
Advertisement
ಶಬರಿಮಲೆ ಯಾತ್ರೆಗೆ ಅಡ್ಡಿ :
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಾದ್ಯಂತ ಶನಿವಾರ ಧಾರಾಕಾರ ಮಳೆಯಾಗಿದೆ. ಪಂಪಾ ನದಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ 2 ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿದೆ. ಭಾರೀ ಮಳೆಯ ಕಾರಣ ಶಬರಿಮಲೆ ಯಾತ್ರೆಯನ್ನು ಶನಿವಾರ ದಿನದ ಮಟ್ಟಿಗೆ ಸ್ಥಗಿತಗೊಳಿಸಿ ಪಟ್ಟಣಂತಿಟ್ಟ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
ತಿರುಪತಿ: ಮುಂದುವರಿದ ಪ್ರವಾಹಸ್ಥಿತಿ :
ತಿರುಪತಿ ಅಕ್ಷರಶಃ ಮುಳುಗಡೆಯಾಗಿದೆ. ಶನಿವಾರವೂ ಮಳೆ ಸುರಿದ ಕಾರಣ ಪ್ರವಾಹ ಇಳಿಕೆಯಾಗಿಲ್ಲ. ಚಂದ್ರಗಿರಿ, ಶ್ರೀಕಾಳಹಸ್ತಿ ಗ್ರಾಮಗಳೂ ಜಲಾವೃತಗೊಂಡಿವೆ. ಅತ್ಯವಶ್ಯಕ ಸಾಮಗ್ರಿಗಳಿಗೂ ಹಾಹಾಕಾರ ಪಡುವ ಸ್ಥಿತಿ ಬಂದಿದೆ.
ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿವೆ. ಅನಂತ ಪುರದ ಕದಿರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಇಬ್ಬರು ಮಕ್ಕಳ ಸಹಿತ ಐವರು ಮೃತಪಟ್ಟಿದ್ದಾರೆ. ಚೆಯ್ಯೂರು ಗ್ರಾಮದಲ್ಲಿ ಮೂರು ಸರಕಾರಿ ಬಸ್‌ಗಳು ಪ್ರವಾಹದಲ್ಲಿ ಸಿಲುಕಿದ್ದು, 35 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಶನಿವಾರ ಮತ್ತು ರವಿವಾರ 10 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
3 ಸಾವು :
ತಮಿಳುನಾಡಿನಲ್ಲೂ ಮಳೆಯ ಅಬ್ಬರ ಮುಂದುವರಿದಿದ್ದು, ಶನಿವಾರ ಒಂದೇ ದಿನ ಮೂವರು ಸಾವಿಗೀಡಾಗಿದ್ದಾರೆ, 300 ಜಾನುವಾರುಗಳು ಮೃತಪಟ್ಟಿವೆ. ಸೇಲಂನ ಮೆಟ್ಟೂರು ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಶನಿವಾರ ತಮಿಳುನಾಡಿನ 37 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸುಮಾರು 10 ಸಾವಿರ ಮಂದಿಗೆ 220 ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ರವಿವಾರವೂ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದಲ್ಲಿ 6 ಮಂದಿ ದುರ್ಮರಣ
ಬೆಂಗಳೂರು : ರಾಜ್ಯದಲ್ಲಿ ಶನಿವಾರ ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರು ಮೃತ ಪಟ್ಟಿದ್ದಾರೆ.
ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸ್ಕೂಟರ್ ಸಮೇತ ಪೊನ್ನಸ್ವಾಮಿ (53) ಅವರು ಕೊಚ್ಚಿಹೋದ ಘಟನೆ ಚಿಕ್ಕಮಗಳೂರು ಜಿಲ್ಲೆ ಹುಲಿ ತಿಮ್ಮಾಪುರದ ತೀರ್ಥಹಳ್ಳ ಸೇತುವೆ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ರಮಣ (45) ನೀರುಪಾಲಾಗಿದ್ದಾರೆ. ಬೆಂಗ ಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿಯಲ್ಲಿ ಮನೆ ಕುಸಿದು ಮುನಿಯಮ್ಮ (65) ಮೃತಪಟ್ಟಿದ್ದಾರೆ. ದನದ ಕೊಟ್ಟಿಗೆಯ ಗೋಡೆ ಕುಸಿದು ತುಮ ಕೂರು ಜಿಲ್ಲೆ ಕುಣಿ ಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮೆಣಸಿನಕೆರೆದೊಡ್ಡಿ ಗ್ರಾಮದ ರೈತ ನಾಗಣ್ಣ (55) ಸಾವಿಗೀಡಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಮನೆ ಕುಸಿದು ಬಸವರಾಜಪ್ಪ ಹಾಲಪ್ಪ (62) ಮೃತಪಟ್ಟರೆ, ಚನ್ನಗಿರಿ ತಾಲೂಕಿನ ನಲ್ಲೂರು ಸೇತುವೆ ಬಳಿ ಕೆಂಚಪ್ಪ (70) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಶನಿವಾರ ದಿನವಿಡೀ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಭಾರೀ ಮಳೆ ಸುರಿದಿದೆ. ಮಳೆಯಿಂದಾಗಿ ಕೃಷಿ ಹಾನಿ ಮುಂದುವರಿದಿದೆ. ತರಕಾರಿ ಧಾರಣೆ ಗಗನಕ್ಕೇರಿದೆ.