ಯೋಗರಾಜ್ ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ಚಿತ್ರದ ಡಬ್ಬಿಂಗ್, ರೀಮೇಕ್ ರೈಟ್ಸ್‌ಗೂ ಬೇಡಿಕೆ ಬರುತ್ತಿದೆ. ಈ ಮೂಲಕ “ಪಂಚತಂತ್ರ’ ಪರಭಾಷೆಗೂ ಹೋಗುತ್ತಿದೆ. ಹೌದು, “ಪಂಚತಂತ್ರ’ ಚಿತ್ರದ ಡಬ್ಬಿಂಗ್ ರೈಟ್ಸ್ ಈಗಾಗಲೇ ಹಿಂದಿಗೆ ಮಾರಾಟವಾಗಿದೆ. ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿರುವುದರಿಂದ ಸಹಜವಾಗಿಯೇ ಚಿತ್ರತಂಡ ಖುಷಿಯಾಗಿದೆ. ಈ ನಡುವೆಯೇ ಚಿತ್ರದ ರೀಮೇಕ್ ರೈಟ್ಸ್‌ಗೂ ಬೇಡಿಕೆ ಬರುತ್ತಿದೆ. ಈಗಾಗಲೇ ಚಿತ್ರ ತೆಲುಗಿಗೆ ರೀಮೇಕ್ ಆಗೋದು ಬಹುತೇಕ ಪಕ್ಕಾ ಆಗಿದ್ದು, ಅಲ್ಲಿನ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ.
ಜೊತೆಗೆ ತೆಲುಗಿನಲ್ಲೂ ಯೋಗರಾಜ್ ಭಟ್ ಅವರೇ ಸಿನಿಮಾ ನಿರ್ದೇಶನ ಮಾಡಬೇಕೆಂದು ಹೇಳಿದ್ದಾರಂತೆ. ಈ ಬಗ್ಗೆ ಮಾತನಾಡುವ ಭಟ್ಟರು, “ತೆಲುಗಿನಿಂದ ರೀಮೇಕ್‌ಗೆ ಆಫರ್ ಬಂದಿದೆ. ಸಿನಿಮಾದ ಕಾನ್ಸೆಪ್ಟ್ ಅವರಿಗೆ ಇಷ್ಟವಾಗಿದೆ. ಜೊತೆಗೆ ತೆಲುಗಿನಲ್ಲೂ ನಾನೇ ನಿರ್ದೇಶನ ಮಾಡಬೇಕೆಂದು ಹೇಳುತ್ತಾರೆ. ಸದ್ಯದಲ್ಲೇ ಎಲ್ಲವನ್ನು ಹೇಳುತ್ತೇನೆ’ ಎನ್ನುವುದು ಭಟ್ಟರ ಮಾತು. ಇನ್ನು, ತೆಲುಗು ಚಿತ್ರಕ್ಕೆ ಈಗಾಗಲೇ ಟೈಟಲ್ ಕೂಡಾ ಫಿಕ್ಸ್ ಆಗಿದೆ.
“ಆಂಧ್ರ ವರ್ಸಸ್ ತೆಲಂಗಾಣ’ ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಇಡಲು ಕಾರಣ, ಚಿತ್ರದ ಕಾನ್ಸೆಪ್ಟ್. ಇಲ್ಲಿ ಹಿರಿಯರು ಹಾಗೂ ಕಿರಿಯರ ನಡುವಿನ ಸ್ಪರ್ಧೆ ಇರುವುದರಿಂದ ಈ ಟೈಟಲ್ ಇಡಲಾಗಿದೆ. ಭಟ್ಟರು ಹೇಳುವಂತೆ ಆಂಧ್ರ ಅಂದರೆ ಹಿರಿಯರು, ತೆಲಂಗಾಣ ಅಂದರೆ ಕಿರಿಯರಂತೆ. ಈ ನಡುವೆಯೇ ಚಿತ್ರ ಹಿಂದಿಗೂ ರೀಮೇಕ್ ಆಗುವ ಸಾಧ್ಯತೆ ಇದೆಯಂತೆ.
ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಭಟ್ಟರು, “ಜನ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಬರುತ್ತಿದ್ದಾರೆ. ಹೊಸ ಕಾನ್ಸೆಪ್ಟ್ ಅನ್ನು ಜನ ಬೆಂಬಲಿಸುತ್ತಿದ್ದಾರೆ’ ಎನ್ನುವುದು ಭಟ್ಟರ ಮಾತು. “ಪಂಚತಂತ್ರ’ ಚಿತ್ರದಲ್ಲಿ ಎರಡು ಜನರೇಶನ್‌ನ ನಡುವಿನ ಕಥೆಯನ್ನು ಹೇಳಿದ್ದರು. ಹಿರಿಯ ಜೀವಗಳ ಹಾಗೂ ಕಿರಿಯರ ನಡುವಿನ ಸ್ಪರ್ಧೆಯನ್ನು, ಜಿದ್ದನ್ನು ಕಟ್ಟಿಕೊಟ್ಟಿದ್ದರು. ಚಿತ್ರದಲ್ಲಿ ವಿಹಾನ್, ಸೋನಾಲ್, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದರು.