Advertisement

ಆಂಧ್ರದ ಶೂಟರ್‌ಗಳಿಗೆ ಸುಪಾರಿ ಸಂಚು..!

10:30 AM Dec 02, 2021 | Team Udayavani |

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರ ಹತ್ಯೆಗೆ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಸಂಚು ರೂಪಿ ಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಡಿಯೋ ವೈರಲ್‌ ಆಗಿದೆ. ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ ಸಂಭಾಷಣೆ ನಡೆಸಿರುವ ವಿಡಿಯೋವೊಂದು ವೈರಲ್‌ ಆಗಿದೆ.

Advertisement

ಆಂಧ್ರಪ್ರದೇಶ ಮೂಲದ ಸುಪಾರಿ ಕಿಲ್ಲರ್ ಅಥವಾ ಶಾರ್ಪ್‌ಶೂಟರ್‌ಗಳನ್ನು ಕರೆಸಿ ಹತ್ಯೆಗೆ ಸಂಚು ರೂಪಿಸಲಾಗಿದೆ. ಈ ಸಂಬಂಧ ಶಾಸಕ ಎಸ್‌.ಆರ್‌.ವಿಶ್ವನಾಥ್‌ ರಾಜಾನುಕುಂಟೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಸಿಎಂ,ಗೃಹ ಸಚಿವರಿಗೂ ದೂರು ನೀಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಎಸ್‌.ಆರ್‌. ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ, ಮಾದನಾಯಕನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲೇ 6 ತಿಂಗಳ ಹಿಂದೆ ಸಂಚು ರೂಪಿಸಿರುವ ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ವಿಶ್ವನಾಥ್‌ ವಿರುದ್ಧ ಗೆಲ್ಲಲು ಬರೋಬ್ಬರಿ 100 ಕೋಟಿ ರೂ. ಬೇಕು. 5 ಕೋಟಿ ರೂ ಕೊಡುತ್ತೇನೆ. ನೀವೇ ಹೊಡೆದು ಹಾಕಿಬಿಡಿ. ಅದಕ್ಕಾಗಿ ಆಂಧ್ರದಿಂದ ಶಾರ್ಪ್‌ ಶೂಟರ್‌ಗಳನ್ನು ಕರೆಸಿ ಹೊಡೆಸೋಣ, ಬೆಳಗ್ಗೆ ತೋಟಕ್ಕೆ ವಿಶ್ವನಾಥ್‌ ಒಬ್ಬನೇ ಹೋಗುತ್ತಿರುತ್ತಾನೆ.

ಆಗ ಹೊಡಿಬಹುದು. ಆದರೆ, ಯಾವುದೇ ಕಾರಣಕ್ಕೂ ಸ್ಕೆಚ್‌ ತಪ್ಪಬಾರದು ಎಂದು ಗೋಪಾಲಕೃಷ್ಣ ನಡೆಸಿರುವ ಸಂಭಾಷಣೆಯಲ್ಲಿ ದಾಖಲಾಗಿದೆ. ಮತ್ತೂಂದೆಡೆ ಗೋಪಾಲಕೃಷ್ಣ ಸಂಭಾಷಣೆ ನಡೆಸುವ ಸ್ಟಿಂಗ್‌ ವಿಡಿಯೋವನ್ನು ಕುಳ್ಳ ದೇವರಾಜ ಮಾಡಿದ್ದ ಎನ್ನ ಲಾಗಿದೆ. ವಿಡಿಯೋ ಪರಿಶೀಲನೆಯ ವೇಳೆ ಆತನು ಸಹ ಹತ್ಯೆ ಪ್ರಚೋದನೆ ನೀಡಿರುವುದು ಬೆಳಕಿಗೆ ಬಂದಿದೆ. ದೇವರಾಜ್‌ ಸ್ಟಿಂಗ್‌ ವಿಡಿಯೋ ಬಳಸಿ ಶಾಸಕ ವಿಶ್ವನಾಥ್‌ ಗೆ ಆಪ್ತನಾಗಲು ಬಯಸಿದ್ದ ಎನ್ನಲಾಗಿದೆ. ವಿಡಿಯೋ ವಿಚಾರ ತಿಳಿಯುತ್ತಿದ್ದಂತೆ ವಿಶ್ವನಾಥ್‌ ಸಿಸಿಬಿಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಹೇಳಿದ್ದರು.

ಸಿಸಿಬಿಯಿಂದ ಗೋಪಾಲಕೃಷ್ಣ, ಕುಳ್ಳ ದೇವರಾಜ್‌ ವಿಚಾರಣೆ: ವಿಶ್ವನಾಥ್‌ ಅವರ ದೂರು ಹಿನ್ನೆಲೆಯಲ್ಲಿ 6 ತಿಂಗಳ ಹಿಂದೆ ನಡೆದ ಘಟನೆ ಕೆಲ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದೆ. ಈ ಮಾಹಿತಿ ಬಂದ ಕೂಡಲೇ ಕಾರ್ಯಾಚರಣೆ ನಡೆಸಲಾಗಿದೆ. ಯಲಹಂಕದ ಹೋಟೆಲ್‌ನಲ್ಲಿ ಆಂಧ್ರಪ್ರದೇಶ ಮೂಲದ ಶಾರ್ಪ್‌ ಶೂಟರ್‌ಗಳು ಬಂದಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

Advertisement

ಆದರೆ, ಅವರು ಸ್ಥಳೀಯರಾಗಿದ್ದು, ಶಾರ್ಪ್‌ ಶೂಟರ್‌ಗಳಲ್ಲ, ಅಪರಾಧ ಹಿನ್ನೆಲೆಯುಳ್ಳವರಲ್ಲ ಎಂಬುದು ಗೊತ್ತಾಗಿದೆ. ಮತ್ತೂಂದೆಡೆ ಇಬ್ಬರು ವ್ಯಕ್ತಿ ಗಳನ್ನು ವಶಕ್ಕೆ ಪಡೆಯುವ ವೇಳೆ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಹಾಗೂ ಕಳ್ಳ ದೇವರಾಜ್‌ನನ್ನು ಹೋಟೆಲ್‌ನಲ್ಲಿಯೇ ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಈ ವೇಳೆ ಯಾವುದೋ ಕಾರ್ಯನಿಮಿತ್ತ ಬಂದಿದ್ದೇವೆ. ಬೇರೆ ಯಾವುದೇ ಹತ್ಯೆ ಸಂಚು ರೂಪಿಸಿಲ್ಲ ಎಂದು ಹೇಳಿದ್ದಾರೆ.

ಜತೆಗೆ ಕುಳ್ಳ ದೇವರಾಜ್‌ ರೌಡಿಶೀಟರ್‌ ಅಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜಮೀನು ವಿಚಾರಕ್ಕೆ ಸಂಚು?: ಕೆಲ ವರ್ಷಗಳ ಹಿಂದೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮತ್ತು ಗೋಪಾಲಕೃಷ್ಣ ಇಬ್ಬರೂ ನೂರಾರು ಕೋಟಿ ರೂ. ಮೌಲ್ಯದ ಜಮೀನು ಪಡೆಯಲು ಮುಂದಾಗಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಅದರಿಂದ ಆಕ್ರೋಶಗೊಂಡಿದ್ದ ಗೋಪಾಲಕೃಷ್ಣ ಕುಳ್ಳ ದೇವರಾಜ್‌ ಜತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾದ ವಿಡಿಯೋಗಳು ಬಹಿರಂಗಗೊಂಡಿವೆ ಎನ್ನಲಾಗಿದೆ. ವಿಡಿಯೋದಲ್ಲಿ

ಇರುವುದೆಲ್ಲವೂ ಸತ್ಯವಲ್ಲ: ಯಲಹಂಕ ಶಾಸಕ ಎಸ್‌. ಆರ್‌.ವಿಶ್ವನಾಥ್‌ ವಿರುದ್ಧ ಯಾವುದೇ ಕೊಲೆ ಸಂಚು ರೂಪಿಸಿಲ್ಲ. ವಿಡಿಯೋದಲ್ಲಿ ರುವುದೆಲ್ಲವೂ ಸತ್ಯವಲ್ಲ ಎಂದು ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಹೇಳಿದ್ದಾರೆ. ತಮ್ಮ ವಿರುದ್ಧ ಎಸ್‌.ಆರ್‌. ವಿಶ್ವನಾಥ್‌ ಕೊಲೆ ಸಂಚಿನ ಆರೋಪ ಮಾಡಿದ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿ, ಕುಳ್ಳದೇವರಾಜ್‌ ವಿಶ್ವನಾಥ್‌ ಆಪ್ತ. ಅವರ ಬಲಗೈ ಬಂಟ. ಕುಳ್ಳದೇವರಾಜ್‌ ಯಾರ ಆಪ್ತ ಅಂತ ಪೊಲೀಸರು ಕಾಲ್‌ ಲಿಸ್ಟ್‌ ತರಿಸಿಕೊಳ್ಳಲಿ.

ವಿಡಿಯೋ ದಲ್ಲಿರುವುದು ಎಲ್ಲವೂ ಸತ್ಯವಲ್ಲ. ವಿಡಿಯೋದಲ್ಲಿ ಕೆಲವೊಂದನ್ನು ಎಡಿಟ್‌ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಸಿಲುಕಿಸಲು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು. ಗೋಪಾಲಕೃಷ್ಣಗೆ ನಾನೇ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದೆ ಅಂತ ಸುಳ್ಳು ಹೇಳುತ್ತಾರೆ. ವಿಡಿಯೋ ದಲ್ಲಿ ಕೆಲವು ಸತ್ಯ ಇದೆ. ಆದರೆ, ಶೇ. 80 ರಷ್ಟು ಸುಳ್ಳಿದೆ. ಕಡಬಗೆರೆ ಸೀನನ ಶೂಟೌಟ್‌ನಲ್ಲಿ ನನ್ನ ಯಾವುದೇ ಸಂಚು ಇಲ್ಲ. ನಾನು ಕೊಲೆ ಮಾಡುವ ಮನುಷ್ಯ ಅಲ್ಲ. ರಾಜಾನುಕುಂಟೆಯಲ್ಲಿ 8 ಎಕರೆ ಜಾಗದ ವಿಷಯದಲ್ಲಿ ಕುಳ್ಳದೇವರಾಜ್‌ ನನ್ನ ಬಳಿ ಬಂದಿದ್ದ ಎಂದಿದ್ದಾರೆ.

ವೈರಲ್‌ ಆದ ವಿಡಿಯೋ ಸಂಭಾಷಣೆ

ಅಪರಿಚಿತ: ಯಾರನ್ನು?  ಗೋಪಾಲಕೃಷ್ಣ: ವಿಶ್ವನಾಥ್‌.

ಗೋಪಾಲಕೃಷ್ಣ: ಇಲ್ಲ, ಎಂಎಲ್‌ಎ ಫಿನಿಷ್‌ ಆಗಬೇಕು. ಇದು ಎರಡರಲ್ಲಿ ಒಂದು ಮಾಡು. ಎರಡರಲ್ಲಿ ಯಾವುದೇ ಮಾಡ್ತಿಯೋ ಹೇಳು?

ಅಪರಿಚಿತ: ಅವನು ಫಿನಿಷ್‌ ಮಾಡಕ್ಕೆ, ನಾನು ಹೆಂಡ್ತಿ ಮಕ್ಕಳನ್ನು ಕಟ್ಟಿಕೊಂಡಿದ್ದಿವಿ. ದುಡ್ಡಲ್ಲಿ ಫಿನಿಷ್‌ ಮಾಡಣ್ಣ, ಇದೆಲ್ಲ ಬಿಡಣ್ಣ ನೀನು.

ಗೋಪಾಲಕೃಷ್ಣ:ಫಿನಿಷ್‌ ಮಾಡಿಸು ಇಲ್ಲ, 100 ಕೋಟಿ ರೂ. ಕೊಡು. ಏನಾದ್ರು ಸರಿ ಫಿನಿಷ್‌ ಮಾಡೋಣ. ನಾನು ನೀನು ಇಬ್ಬರೇ ಕೆಲಸ ಮಾಡೋಣ. ಅಷ್ಟು ಸೀಕ್ರೆಟಾಗಿ ಮಾಡಬೇಕು. ಒಬ್ಬರಿಗೂ ಗೊತ್ತಾಗಬಾರದು ನಾನು ನೀನು ಇಬ್ಬರೇ ಮಾಡೋಣ. ಅಪರಿಚಿತ: ಮಾಡಬಹುದು. ಆದರೆ, ರಿಯಲ್‌ ಎಸ್ಟೇಟ್‌ ಮೂಲಕ ಮಾಡಬೇಕು.

ಗೋಪಾಲಕೃಷ್ಣ: ರಿಯಲ್‌ ಎಸ್ಟೇಟ್‌ ನಲ್ಲಾದರೂ ಸರಿ, ಏನ್‌ ಮಾಡಿದ್ರು ಸರಿ ನಿಗುರಿಸಿ ಬಿಡಣ್ಣ.. ಡಿಸಿ,ಎಸಿ, ಪಿಸಿ, ಚೀಫ್ ಸೆಕ್ರಟರಿ ಏನ್‌ ಬೇಕಾದ್ರೂ ಅರೆಂಜ್‌ ಮಾಡ್ಕೊಡ್ತೀನಿ. ಒಳ್ಳೆ ಯಾವುದಾದ್ರು ಸಾವಕಾರನ ಪರಿಚಯ ಮಾಡಿಕೊಳ್ಳೋಣ. ಮುಗಿಸಿದರು ಸರಿ, 50 ಲಕ್ಷ ದಿಂದ ಒಂದು ಕೋಟಿ ಆದರೂ ಸರಿ ಮಾಡಿಸಬೇಕು. ಇಲ್ಲ ಸೋಲಿಸಿ ಬಿಸಾಕಬೇಕು.

ಅಪರಿಚಿತ: ಹತ್ತು ವರ್ಷ ಸರ್ಕಾರ ಇತ್ತು.ಯೂಸ್‌ ಮಾಡಿಕೊಳ್ಳದೆ, ತರಲೆ ನನ್ನ ಮಕ್ಕಳು, ಅಂಟಿಗಳ ಜತೆ ಇರೋರನ್ನು ಜತೆ ಇಟ್ಕೊಂಡು, ನನ್ನ ಮಕ್ಕಳು ರಘು, ವರದನನ್ನು ಇಟ್ಕೊಂಡು ನೀನು.

ಗೋಪಾಲಕೃಷ್ಣ: ಹಿಂದಿನದು ಬಿಟ್ಟುಬಿಡು. ಇವಾಗ ಐಡಿಯಾ ಮಾಡು, ಅವನು μನಿಷ್‌ ಮಾಡ ಬೇಕು. ಇಲ್ಲ ನೂರು ಕೋಟಿ ದುಡ್ಡು ಬರಬೇಕು. ಐಡಿಯಾ ಮಾಡು. ಅಣ್ಣ ಇವನನ್ನು ಮುಗಿಸಿದ್ರೆ ನೂರು ಕೋಟಿ ಸಿಗುತ್ತೆ, ಅನ್ನೋದಾದರೆ ನಡಿ ಮುಗಿಸೋಣ. ಒಂದೇ ಕಡೆ ಸಿಗಬೇಕಲ್ಲ. ಯಾವತರ ಐಡಿಯಾ ಮಾಡು ಚೆಲ್ಲಿ ಬಿಡೋಣ ದುಡ್ಡನ್ನು.

ಅಪರಿಚಿತ: ಚೆಲ್ಲು ಕಳ್ಳ ರಾಜಗೆ ಸುಬ್ಬಣಗೆ ಅಂತವರಿಗೆ ಚೆಲ್ಲು ಅಣ್ಣ. ಇನ್ನು ಎರಡು ಲಕ್ಷ ಜಾಸ್ತಿ ಕೊಡು.

ಗೋಪಾಲಕೃಷ್ಣ: ನಂಗೀಗತಿ.. ಉರುಸ್‌ ಬೇಡ ಮೊದಲು ಈ ಕೆಲಸ ಮಾಡು. ಅಪರಿಚಿತ: ಆಯ್ತು ಒಂದೆರಡು ವ್ಯವಹಾರ ಹುಡುಕುತ್ತೇನೆ ಬಿಡಿ ಅವರದ್ದು. ಇವಾಗ 30 ಎಕರೆ ಹುಡುಕಿದವನಿಗೆ, ಇನ್ನು ಐವತ್ತು ಎಕರೆ ಹುಡುಕೋದು ಕಷ್ಟನಾ?

ಗೋಪಾಲಕೃಷ್ಣ: ಯಾವುದು 30 ಎಕರೆ?   ಅಪರಿಚಿತ: ಮಾದಪ್ಪನಹಳ್ಳಿದು.

ಗೋಪಾಲಕೃಷ್ಣ: ಮಾದಪ್ಪನಹಳ್ಳಿದಾದ್ರೆ, ಅಪರಿಚಿತ: ಸಾಕಲ್ವ ಅದೇ?ಎಕರೆ ಮೇಲೆ ಒಂದು ಕೋಟಿ ಇಡೋಣ ಬಿಡಣ್ಣ. ಗೋಪಾಲಕೃಷ್ಣ: ಡೈರೆಕ್ಟರ್‌ ಪರಿಚಯನಾ? ಅಪರಿಚಿತ: ಹೂ. ಗೋಪಾಲಕೃಷ್ಣ: ನಡಿ ಮಾತಾಡೋಣ.

ಅಪರಿಚಿತ: ಕರೆದುಕೊಂಡು ಹೋಗ್ತಿನಿ ನಡಿ. ಇವತ್ತು ಸಂಜೆ ತೋರಿಸುತ್ತಾರೆ. ದಾಖಲೆಗಳು ತಗೊಂಡು ಬರ್ತಿನಿ. ಮಾಡ್ತಿಯಾ ಮಾಡು ನೀನೆ. ಗೋಪಾಲಕೃಷ್ಣ: ನೂರು ಕೋಟಿ ಇಲ್ಲ. ನಾಲ್ಕೈದು ಕೋಟಿ ಖರ್ಚು ಮಾಡಿ ಫಿನಿಷ್‌ ಮಾಡೋಣ.

ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ: ವಿಶ್ವನಾಥ್

ಬೆಂಗಳೂರು: ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್‌. ಆರ್‌.ವಿಶ್ವನಾಥ್‌ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಹತ್ಯೆ ಸಂಚಿನ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮುಖಂಡನಾಗಿರುವ ಗೋಪಾಲಕೃಷ್ಣ ಈ ಹಿಂದೆ ನನ್ನ ವಿರುದ್ಧ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲನುಭವಿಸಿದ್ದರು.

ರಾಜಕೀಯ ದ್ವೇಷದಿಂದ ನನ್ನ ಕೊಲೆಗೆ ಸಂಚು ರೂಪಿಸಿರಬೇಕು ಎಂದರು. ಮಂಗಳವಾರ ಸಂಜೆ ಯಲಹಂಕದಲ್ಲಿರುವ ನನ್ನ ಗೃಹ ಕಚೇರಿಗೆ ಒಂದು ಪತ್ರ ಬಂದಿತ್ತು. ಅದು ಕುಳ್ಳ ದೇವರಾಜ್‌ ಬರೆದಿದ್ದ ಕ್ಷಮಾಪಣ ಪತ್ರವಾಗಿತ್ತು. ಯಲಹಂಕ ಶಾಸಕ ವಿಶ್ವನಾಥ್‌ ಅವರನ್ನು ಕೊಲೆ ಮಾಡದಿದ್ದರೆ ನಿನ್ನನ್ನು ಮತ್ತು ವಿಶ್ವನಾಥ್‌ ಅವರನ್ನು ಕೊಲೆ ಮಾಡುವುದಾಗಿ ಗೋಪಾಲಕೃಷ್ಣ ಬೆದರಿಕೆ ಹಾಕಿದ್ದಾರೆ.

ನಾನು ಆರ್ಥಿಕ ಮುಗ್ಗಟ್ಟಿನಿಂದ ಗೋಪಾಲಕೃಷ್ಣ ಜೊತೆ ಕೈಜೋಡಿಸಿದ್ದು ತಪ್ಪಾಗಿದೆ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಪೊಲೀಸ್‌ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಅಪರಿಚಿತರ ಮೂಲಕ ನನ್ನ ಕಚೇರಿಗೆ ತಲುಪಿಸಿದ್ದ ಎಂದು ಹೇಳಿದರು. ನಾನು ಸದಾ ಒಬ್ಬಂಟಿಯಾಗಿಯೇ ಓಡಾಡುತ್ತೇನೆ. ಹೀಗಾಗಿ ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ಹಲವು ದಿನಗಳ ಹಿಂದೆಯೇ ಬಂದಿತ್ತು.

ಆದರೆ, ನನ್ನ ಕೊಲೆಗೇ ಸಂಚು ನಡೆಯುತ್ತಿದೆ ಎಂಬುದು ಮಾತ್ರ ತಿಳಿದಿರಲಿಲ್ಲ ಎಂದರು. ಕಡಪ ಮತ್ತು ಆಂಧ್ರ ಪ್ರದೇಶದಿಂದ ಕೊಲೆಗಡುಕರಿಗೆ ಸುಪಾರಿ ನೀಡಿ ವಿಶ್ವನಾಥ್‌ ಅವರನ್ನು ಕೊಲೆ ಮಾಡಿಸುವುದಾಗಿ ಗೋಪಾಲಕೃಷ್ಣ ಪ್ರಾಣ ಬೆದರಿಕೆ ಹಾಕಿ¨ªಾನೆ ಎಂದು ದೇವರಾಜ್‌ ತಪ್ಪೊಪ್ಪಿಗೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ ಎಂದರು.

ಈ ಹತ್ಯೆ ಸಂಚಿನ ವಿರುದ್ಧ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಪ್ರಕರಣದ ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ವಿಶ್ವನಾಥ್‌ ತಿಳಿಸಿದರು.

“ವಿಶ್ವನಾಥ್‌ ಹತ್ಯೆಗೆ ಸಂಚು ನಡೆದಿತ್ತು ಎಂಬುದರ ಬಗ್ಗೆ ಮಾಹಿತಿ ಬಂದಿದೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.”‌ ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

“ಶಾಸಕರಾದ ವಿಶ್ವನಾಥ್‌ ಅವರು ರಾಜಾನುಕುಂಟೆ ಠಾಣೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದಲೇ ಸಂಚು ರೂಪಿಸಲಾಗಿದೆ ಎಂದು ದೂರು ನೀಡಲಾಗಿದೆ. ಸದ್ಯ ಎಡಿಟೆಡ್‌ ವಿಡಿಯೋ ಅದು ಮಾತ್ರ ಸಿಕ್ಕಿದೆ. ಅದರ ಪ್ರಕಾರ ದೂರನ್ನು ಸ್ವೀಕರಿಸಲಾಗಿದೆ. ತನಿಖೆ ವೇಳೆ ಅಸಲಿ ವಿಡಿಯೋ ಪಡೆದು ತನಿಖೆ ಮುಂದುವರಿಸಲಾಗುತ್ತದೆ.” ವಂಶಿಕೃಷ್ಣ, ಎಸ್ಪಿ, ಬೆಂಗಳೂರು ಗ್ರಾಮಾಂತರ

Advertisement

Udayavani is now on Telegram. Click here to join our channel and stay updated with the latest news.

Next