ಬೆಂಗಳೂರು: ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ತಮ್ಮ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪಿಸುವಂತೆ ಮಡಕಶಿರಾ ವಿಧಾನಸಭಾ ಕ್ಷೇತ್ರದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಶಾಸಕ ಎಂ.ಎಸ್. ರಾಜು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಭೇಟಿಯಾಗಿ ಮನವಿ ಸಲ್ಲಿಸಿದರು.
ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಡಕಶಿರಾ ಶಾಸಕ ಎಂ.ಎಸ್. ರಾಜು ಜತೆ ಮಾತುಕತೆ ನಡೆಸಿ ಉದ್ದಿಮೆದಾರರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಈ ವೇಳೆ ಅಲ್ಲಿನ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ ಕೂಡ ಹಾಜರಿದ್ದರು.
ಮಡಕಶಿರಾದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಪಾವಗಡ, ಶಿರಾ, ಮಧುಗಿರಿ, ಶಿರಾ, ಹಿರಿಯೂರು ಭಾಗದ ಜನರಿಗೂ ಅನುಕೂಲ ಆಗುತ್ತದೆ. ಎಲ್ಲರಿಗೂ ಉದ್ಯೋಗ ಸಿಗುತ್ತದೆ, ಕೆಲಸಕ್ಕೆ ವಲಸೆ ಹೋಗುವುದು ತಪ್ಪುತ್ತದೆ. ಅಲ್ಲಿಗೆ ಸೂಕ್ತವಾಗುವ ಕೈಗಾರಿಕೆ ತರುವುದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಮಡಕಶಿರಾ ಶಾಸಕ ಎಂ.ಎಸ್. ರಾಜುಗೆ ಭರವಸೆ ನೀಡಿದರು.
ಕೈಗಾರಿಕೆ ಕ್ಲಸ್ಟರ್ ಮಾಡಿದ್ರೆ ಅನುಕೂಲ:
ಮಡಕಶಿರಾ ಶಾಸಕ ಎಂ.ಎಸ್. ರಾಜು ಮಾತನಾಡಿ, ಮಡಕಶಿರಾ ಮತ್ತು ಸುತ್ತಮುತ್ತಲ ಪ್ರದೇಶದ ಸುಮಾರು 40,000ಕ್ಕೂ ಹೆಚ್ಚು ನಮ್ಮ ಭಾಗದ ಬಡ ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ತಾಲೂಕಿನಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಅನುಕೂಲವಾದ ಜಾಗವಿದೆ. ಕೈಗಾರಿಕೆ ಕ್ಲಸ್ಟರ್ ಮಾಡಿದರೆ ಮಡಕಶಿರಾ ಸೇರಿದಂತೆ ನಮ್ಮ ಗಡಿಗೆ ಹೊಂದಿಕೊಂಡಿರುವ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಬಡ ಯುವಕರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಪಾವಗಡ ಹತ್ತಿರವೇ 1,600 ಎಕರೆ ಭೂಮಿ ಇದೆ. ಕೈಗಾರಿಕೆ ಸ್ಥಾಪನೆ ಮಾಡಿದರೆ ಅಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಮನವಿ ಮಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂಜಿನಪ್ಪ ಸೇರಿ ಹಲವು ನಾಯಕರು ಹಾಜರಿದ್ದರು.