Advertisement

ಹಾವು ಕಡಿತ ತಡೆಗೆ ಸರ್ಪಪೂಜೆ

06:00 AM Aug 28, 2018 | |

ಅಮರಾವತಿ: ಕೃಷ್ಣಾ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗದೇವನ ಕೋಪ ತಣಿಸಲು ಆಂಧ್ರ ಸರ್ಕಾರ ಬುಧವಾರ ಸರ್ಪಪೂಜೆ ಆಯೋಜಿಸಿದೆ. ಕಳೆದ ಎರಡು ತಿಂಗಳಿನಿಂದೀಚೆಗೆ ಕೃಷ್ಣಾ ಜಿಲ್ಲೆಯಲ್ಲಿ ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದರೆ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ.  ಮೋಪಿದೇವಿಯಲ್ಲಿರುವ ಪ್ರಸಿದ್ಧ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಸಾಮಾನ್ಯವಾಗಿ ವೈಯಕ್ತಿಕವಾಗಿ ಸರ್ಪಯಾಗ ಜರಗುತ್ತಿರುತ್ತವೆ. ಆದರೆ ಆ.29ರಂದು ಸರ್ಪ ದೋಷ ನಿವಾರಣಾ ಪೂಜೆಯನ್ನು ಸರ್ಕಾರದ ಮುಜರಾಯಿ ಇಲಾಖೆಯೇ ಹಮ್ಮಿಕೊಂಡಿದೆ.

Advertisement

ಮುಜರಾಯಿ ಇಲಾಖೆ ಹಾಗೂ ಕೃಷ್ಣಾ ಜಿಲ್ಲಾ ಆಡಳಿತದ ಅಧೀನದ ಅರ್ಚಕರು ಈ ಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಲಕ್ಷ್ಮೀಕಾಂತಂ ಹೇಳಿದ್ದಾರೆ. ಆದರೆ ಸರ್ಕಾರದ ಈ ಸರ್ಪಪೂಜೆಯ ವಿರುದ್ಧ ಜನ ವಿಜ್ಞಾನ ವೇದಿಕೆಯಂತಹ ಸಂಸ್ಥೆಗಳು ಅಪಸ್ವರ ಎತ್ತಿವೆ. ಇದು ಜನರ ಕಣ್ಣೊರೆಸುವ ತಂತ್ರ, ಇದರಿಂದ ಸಾರ್ವಜನಿಕರ ಹಣ ಪೋಲಾಗಲಿದೆ ಎಂದು ಜನ ವಿಜ್ಞಾನ ವೇದಿಕೆ ಹೇಳಿದೆ.

ಭಾರೀ ಮಳೆಯ ಕಾರಣದಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿದಿದ್ದು, ಹಾವುಗಳು ರೈತರ ಗದ್ದೆಗಳತ್ತ ಹಾಗೂ ಹಳ್ಳಿಗಳತ್ತ ಬರುತ್ತಿವೆ. ಜಿಲ್ಲೆಯ ದೀವಿಸೀಮಾ ಭಾಗದ ನಾಗಯಲಂಕಾ ಮತ್ತು ಅವನಿಗದ್ದ ಗ್ರಾಮಗಳಲ್ಲಿ ಹಾವುಗಳ ಉಪಟಳ ವಿಪರೀತವಾಗಿದೆ. ಕಳೆದ 10 ದಿನಗಳಿಂದ ಅವನಿಗದ್ದದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೊಳಗಾಗಿ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next