ಬೆಂಗಳೂರು: ಮರಳಿನ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಿ, ಕೃತಕ ಮರಳು ಅಭಾವ ಸೃಷ್ಟಿಸುವ ಹುನ್ನಾರ ತಡೆಗಟ್ಟಿ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಮರಳು ಪೂರೈಕೆಗೆ ರಾಜ್ಯ ಸರ್ಕಾರವು ಆಂಧ್ರ ಮಾದರಿಯ ನೀತಿ ಜಾರಿಗೊಳಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮರಳು ನೀತಿಯ ಎಲ್ಲ ಗೊಂದಲ ನಿವಾರಿಸಿ ಸ್ಪಷ್ಟ ನೀತಿ ಜಾರಿಗೊಳಿಸಲಾಗುವುದು. ನೀತಿ ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಹಾಲಿ ಇರುವ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.ಸದ್ಯದಲ್ಲೇ ಇಲಾಖೆಯ ಅಧಿಕಾರಿಗಳ ತಂಡ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಲ್ಲಿನ ಮರಳು ಹರಾಜು, ಪೂರೈಕೆ, ರಾಯಧನ ಸಂಗ್ರಹ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಿದೆ.
ಮರಳು ವಿಚಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ, ಸಾರಿಗೆ, ಲೋಕೋ ಪಯೋಗಿ ಇಲಾಖೆಗಳ ಹಂತಗಳಲ್ಲಿ ನಿಯಂತ್ರಣ ನಡೆಯಲಿದೆ. ಮರಳಿನ ವ್ಯವಸ್ಥಿತ ಪೂರೈಕೆ, ಅಕ್ರಮ ಸಾಗಾಟ ತಡೆಗಟ್ಟಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು , ಪೊಲೀಸ್ ಇಲಾಖೆಯ ನೆರವು ಪಡೆಯಲಾಗುವುದು. ಸದ್ಯದಲ್ಲೇ ಹಿರಿಯ ಅಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದರು.
ಅದೇ ರೀತಿ ಗ್ರಾನೈಟ್ ಗಣಿಗಾರಿಕೆಯಲ್ಲೂ ಸಾಕಷ್ಟು ಸಮಸ್ಯೆಗಳಿದ್ದು ರಾಜಸ್ಥಾನ ಮಾದರಿಯಲ್ಲಿ ನಿಯಮ ಜಾರಿಗೊಳಿಸಲು ಚಿಂತನೆ ನಡೆದಿದೆ. ಉದ್ದಿಮೆದಾರರು ಹಾಗೂ ಅಧಿಕಾರಿಗಳನ್ನು ರಾಜಸ್ಥಾನಕ್ಕೆ ಕಳುಹಿಸಲಾಗುವುದು. ಗ್ರಾನೈಟ್ ಬ್ಲಾಕ್‌ನಿಂದ ಕಲ್ಲು ತೆಗೆದು ಪಾಲಿಶಿಂಗ್ ಹಂತಕ್ಕೆ ತಲುಪುವಾಗ ರಾಯಧನ ಪಾವತಿ ಖಾತರಿಪಡಿಸಿಕೊಳ್ಳಲಾಗುವುದು. ಅಕ್ರಮಕ್ಕೆ ಯಾವುದೇ ರೀತಿಯಲ್ಲೂ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಗಣಿಗಾರಿಕೆ ಪ್ರದೇಶ ದಲ್ಲಿ ಪುನಶ್ಚೇತನ, ಅಭಿವೃದ್ಧಿ, ಪರಿಸರ ಸಂರಕ್ಷಣೆಗಾಗಿ ಸಂಗ್ರಹವಾಗಿರುವ ಸಿಎಸ್‌ಆರ್ ನಿಧಿ 15 ಸಾವಿರ ಕೋಟಿ ರೂ. ಇದ್ದು, ಅದಕ್ಕೆ ಬಡ್ಡಿಯೇ 2 ಸಾವಿರ ಕೋಟಿ ರೂ. ಬಂದಿದೆ. ಆ ನಿಧಿಯ ಬಳಕೆ ವಿಚಾರ ಸುಪ್ರೀಂಕೋರ್ಟ್‌ನಲ್ಲಿದ್ದು, ಆದಷ್ಟು ಬೇಗ ಇತ್ಯರ್ಥಗೊಂಡರೆ ಮುಂದಿನ ಹತ್ತು ವರ್ಷಗಳ ಸ್ಥಿತಿ ಗಮನದಲ್ಲಿಟ್ಟುಕೊಂಡು 25 ಸಾವಿರ ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಿದ್ದೇವೆ ಎಂದರು.
ಮರಳು ಮಾರಾಟ, ಬಳಕೆಗೆ ಅನುಮತಿ: ಪ್ರವಾಹದಿಂದ ಕೃಷಿಕರ ಜಮೀನಿನಲ್ಲಿ ಸುಮಾರು ಎರಡು ದಶಲಕ್ಷ ಟನ್ ಮರಳು ಸಂಗ್ರಹವಾಗಿದ್ದು, ಅದನ್ನು ಸ್ವಂತದ ಬಳಕೆಗೆ ಉಚಿತವಾಗಿ, ಬೇರೆಯವರಿಗೆ ರಾಯಧನ ಪಾವತಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರವಾಹ ಸಂದರ್ಭದಲ್ಲಿ ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೃಷಿಕರ ಜಮೀನಿನಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ ಎಂದರು.
1526 ಕೋಟಿ ರೂ. ಸಂಗ್ರಹ: ಇಲಾಖೆಯಿಂದ ಕಳೆದ ವರ್ಷ 3027 ಕೋಟಿ ರೂ. ರಾಯಧನ ಸಂಗ್ರಹವಾಗಿದ್ದು, ಈ ವರ್ಷ 3550 ಕೋಟಿ ರೂ. ಗುರಿ ಹೊಂದಲಾಗಿದೆ. ಈಗಾಗಲೇ 1526 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಚಿವರು ಹೇಳಿದರು.