Advertisement

ಕಾಪು ಜನಾಂಗಕ್ಕೆ ಶೇ.5 ಮೀಸಲು

08:10 AM Dec 03, 2017 | Harsha Rao |

ಹೈದರಾಬಾದ್‌: ಕಾಪು ಜನಾಂಗಕ್ಕೆ ಶೇ.5ರಷ್ಟು ಮೀಸಲಾತಿ ನೀಡಲು ಆಂಧ್ರ ವಿಧಾನಸಭೆ ಶನಿವಾರ ಅವಿರೋಧವಾಗಿ ಅನುಮೋದನೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಶೇ.50ರಷ್ಟು ಮೀಸಲಾತಿಯಿದ್ದು, ಕಾಪು ಜನಾಂಗಕ್ಕೆ ಮೀಸಲಾತಿ ನೀಡಿರುವುದರಿಂದ ಒಟ್ಟು ಮೀಸಲಾತಿ ಶೇ.55ಕ್ಕೆ ಏರಿಕೆಯಾಗಲಿದೆ. ಆದರೆ ಸುಪ್ರೀಂಕೋರ್ಟ್‌ ಈಗಾಗಲೇ ಮೀಸಲಾತಿ ಶೇ.50 ದಾಟುವಂತಿಲ್ಲ ಎಂದು ಆದೇಶಿಸಿದೆ. ಹೀಗಾಗಿ ಇದು ಸುಪ್ರೀಂಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗಲಿದೆ.

Advertisement

ಇದು ತೆಲುಗು ದೇಸಂ ಪಾರ್ಟಿಯ ಪ್ರಮುಖ ಚುನಾವಣಾಪೂರ್ವ ಭರವಸೆಯಾಗಿತ್ತು. ಇದಕ್ಕಾಗಿ ಕಾಪು ಸಮುದಾಯ ತೀವ್ರ ಪ್ರತಿಭಟನೆಯನ್ನೂ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶ ಮಂಜುನಾಥ ಆಯೋಗದ ವರದಿಯನ್ನು ಚರ್ಚಿಸಿ ವಿಧಾನಸಭೆಯಲ್ಲಿ ಮೀಸಲಾತಿಗಾಗಿ ಅನುಮೋದನೆ ನೀಡಲಾಗಿದೆ.

ಕೇಂದ್ರಕ್ಕೆ ಹೊಸತಲೆನೋವು:  ಈ ಆದೇಶ ಜಾರಿಗೊಳಿಸಲು ರಾಜ್ಯಕ್ಕೆ ಅಧಿಕಾರವಿಲ್ಲ. ಹೀಗಾಗಿ ಮಸೂದೆ ಯನ್ನು ಕೇಂದ್ರ ಸರಕಾರಕ್ಕೆ ಕಳುಹಿ ಸಲಾಗುತ್ತದೆ. ಇದನ್ನು ನಾವು ಕೇಂದ್ರಕ್ಕೆ ಕಳುಹಿಸುತ್ತೇವೆ. ಪರಿಚ್ಛೇದ 9ರಲ್ಲಿ ಇದನ್ನೂ ಸೇರಿಸುವಂತೆ ಕೇಂದ್ರ ಸರಕಾರವನ್ನು ನಾವು ಆಗ್ರಹಿಸುತ್ತೇವೆ ಎಂದು ಆಂಧ್ರ ಸಿಎಂ ಎನ್‌.ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಹೀಗಾಗಿ ಇದು ಕೇಂದ್ರ ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣ ಮಿಸಲಿದೆ.

ಇದೇ ಸಮಸ್ಯೆ ಗುಜರಾತ್‌ನಲ್ಲೂ ಕಾಣಿಸಿಕೊಂಡಿದ್ದು, ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಲಾಗದ ಕಾರಣದಿಂದ ಪಟೇಲ್‌ ಸಮುದಾಯ ತೀವ್ರ ಹೋರಾಟ ನಡೆಸಿತ್ತು. 

ಈಗ ಕಾಪು ಸಮುದಾಯಕ್ಕೆ ಅನುಮೋದನೆ ನೀಡಿದರೆ ಪಟೇಲ್‌ ಸಮುದಾಯಕ್ಕೂ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಇತರ ರಾಜ್ಯಗಳ ಸಮುದಾಯಗಳೂ ಮೀಸಲಾತಿಗೆ ಬೇಡಿಕೆ ಇಡುತ್ತವೆ.

Advertisement

ಯಾರಿಗೆ ಎಷ್ಟು ಮೀಸಲಾತಿ?
ಹೊಸ ಮಸೂದೆಯಲ್ಲಿ ಹಿಂದುಳಿದ ಜಾತಿ ಅಡಿ ಕಾಪುಗಳಿಗೆ ಶೇ.5 ಮೀಸಲಾತಿ ನೀಡಲು ಪ್ರಸ್ತಾವಿಸಲಾಗಿದೆ. ಈಗಾಗಲೇ ಹಿಂದುಳಿದ ಜಾತಿಗಳ ಎ, ಬಿ, ಸಿ, ಡಿ ಮತ್ತು ಇ ವಿಭಾಗದಲ್ಲಿ ಶೇ.29, ಪರಿಶಿಷ್ಟ ಜಾತಿಗಳಿಗೆ ಶೇ.15 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 6 ಮೀಸಲಾತಿ ನೀಡಲಾಗಿದೆ. ಈಗ ಕಾಪುಗಳಿಗೆ ಶೇ.5 ಮೀಸಲಾತಿ ನೀಡಿದರೆ ಒಟ್ಟು ಮೀಸಲಾತಿಯ ಪ್ರಮಾಣ ಶೇ.55 ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next