ಅಮರಾವತಿ: ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂವನ್ನು ಮೇ 31ರವರೆಗೆ ವಿಸ್ತರಿಸಲು ನಿರ್ಧರಿಸಿರುವುದಾಗಿ ಆಂಧ್ರಪ್ರದೇಶ ಸರ್ಕಾರ ಸೋಮವಾರ (ಮೇ 17) ನಿರ್ಧರಿಸಿದೆ.
ಇದನ್ನೂ ಓದಿ:ಇಳಿಕೆ ಕಂಡ ಕೋವಿಡ್ ಪ್ರಕರಣ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 848 ಅಂಕ ಏರಿಕೆ
ಕೋವಿಡ್ 19 ಕರ್ಫ್ಯೂ ಪ್ರತಿದಿನ ಬೆಳಗ್ಗೆ 6ಗಂಟೆಗೆ ಆರಂಭವಾಗುತ್ತಿದ್ದು, ನಿಗದಿಯಂತೆ ಮೇ 18ರಂದು ಕರ್ಫ್ಯೂ ಮುಕ್ತಾಯವಾಗಬೇಕಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪುನರ್ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಮೇ ಮೊದಲ ವಾರದಲ್ಲಿ 1,43,684 ಪ್ರಕರಣಗಳು ಪತ್ತೆಯಾಗಿದ್ದು, ಮೇ 8ರಿಂದ 16ರವರೆಗೆ ಕೋವಿಡ್ ಪ್ರಕರಣ 1,90,117ಕ್ಕೆ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ. ಆಂಧ್ರಪ್ರದೇಶದಲ್ಲಿ ದಿನಂಪ್ರತಿ 20,000 ಕೋವಿಡ್ ಪ್ರಕರಣಗಳು ವರದಿಯಾಗುತ್ತಿತ್ತು. ಮೇ 16ರಂದು ದಾಖಲೆಯ 24,171 ಪ್ರಕರಣ ವರದಿಯಾಗಿತ್ತು. ಕೋವಿಡ್ ಕರ್ಫ್ಯೂ ಯಾವುದೇ ಪರಿಣಾಮ ಬೀರಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ವಿಶ್ಲೇಷಿಸಲಾಗಿದೆ.
ಕನಿಷ್ಠ ನಾಲ್ಕು ವಾರಗಳ ಕಾಲ ಕರ್ಫ್ಯೂ ಜಾರಿಗೊಳಿಸಿದರೆ ಸಾಧಾರಣ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ಫ್ಯೂ ಮುಂದುವರಿಸುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.