ತಿರುಪತಿ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ವಿಐಪಿ ದರ್ಶನ ಸಮಯವನ್ನು ಕಡಿತಗೊಳಿಸಿ, ಧರ್ಮ ದರ್ಶನದ ಸಮಯವನ್ನು ವಿಸ್ತರಿಸಲು ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್ ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಇಒ ಎ.ವಿ.ಧರ್ಮಾರೆಡ್ಡಿ, “ದಿನದಲ್ಲಿ ಒಟ್ಟು 18 ಗಂಟೆಗಳು ದರ್ಶನಕ್ಕೆ ಲಭ್ಯವಿದೆ.
ಈ ಪೈಕಿ 3 ಗಂಟೆಗಳನ್ನು ಮಾತ್ರ ವಿಐಪಿ ದರ್ಶನಕ್ಕೆ ಮೀಸಲಿಡಲಾಗುವುದು. ಉಳಿದ 15 ಗಂಟೆಗಳನ್ನು ಧರ್ಮ ದರ್ಶನದ ಮೂಲಕ ಬರುವ ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗುವುದು.
ಅಲ್ಲದೇ ತಿರುಮಲದಲ್ಲಿ ಲಭ್ಯವಿರುವ ವಸತಿ ಕೊಠಡಿಗಳ ಪೈಕಿ ಶೇ.85ರಷ್ಟು ಕೊಠಡಿಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. 7,400 ಕೊಠಡಿಗಳು ಮತ್ತು ನಾಲ್ಕು ಯಾತ್ರಿಗಳ ಸಹಾಯ ಕೇಂದ್ರಗಳನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ,’ ಎಂದು ತಿಳಿಸಿದ್ದಾರೆ.