ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಂದು ವೇಳೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ನೀಡಿದರೆ, 75 ರೂಪಾಯಿಗೆ ಮದ್ಯ ನೀಡಲಾಗುವುದು ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಯೂರೋಪ್ ನಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ, ಅದಕ್ಕೇ ಮತಾಂತರ : ಸಂಸದ ಸಿಂಹ
ವಿಜಯವಾಡದಲ್ಲಿ ಮಂಗಳವಾರ(ಡಿಸೆಂಬರ್ 28) ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋಮು, “ನೀವು ಬಿಜೆಪಿಗೆ ಅಧಿಕಾರ ನೀಡಿದರೆ, ನಾವು ನಿಮಗೆ 75 ರೂಪಾಯಿಗೆ ಮದ್ಯವನ್ನು ಮಾರಾಟ ಮಾಡುತ್ತೇವೆ. ಒಂದು ವೇಳೆ ಅಧಿಕ ಆದಾಯ ಬಂದಲ್ಲಿ, 50 ರೂಪಾಯಿಗೆ ಮದ್ಯ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ಕಡಿಮೆ ಗುಣಮಟ್ಟದ ಮದ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಸೋಮು ವೀರರಾಜು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಡಿಮೆ ಬೆಲೆಗೆ ಮದ್ಯ ಲಭ್ಯವಾಗಬೇಕಾದರೆ 2024ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನರು ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಹೇಳಿದ್ದರು.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮದ್ಯದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸುವಂತೆ ಆದೇಶ ಹೊರಡಿಸಿತ್ತು. ಅಲ್ಲದೇ ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಗಳ ಮೇಲೂ ಶೇ.15ರಿಂದ 20ರಷ್ಟು ಬೆಲೆಯನ್ನು ಕಡಿತಗೊಳಿಸಿತ್ತು.
ಆಡಳಿತಾರೂಢ ವೈಎಸ್ ಆರ್ ಸಿಪಿ ಹಾಗೂ ವಿಪಕ್ಷ ತೆಲುಗು ದೇಶಂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಸೋಮು ವೀರರಾಜು, ಆಂಧ್ರಪ್ರದೇಶದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜನರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.