Advertisement

ಅಂಡಾರು: ಸಂಪೂರ್ಣ ಹದಗೆಟ್ಟ ಕೋಲಿಬೆಟ್ಟು -ತುರ್ಕೆರೆಗುಡ್ಡೆ ರಸ್ತೆ

12:02 AM Jun 14, 2019 | Team Udayavani |

ಅಜೆಕಾರು: ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಂಡಾರು ಗ್ರಾಮದ ಕೋಲಿಬೆಟ್ಟು-ತುರ್ಕೆರೆಗುಡ್ಡೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೆಸರಿನಿಂದ ಆವೃತಗೊಂಡಿದೆ.

Advertisement

ಸುಮಾರು 2.5 ಕಿ.ಮೀ. ಯಷ್ಟು ಉದ್ದವಿರುವ ಈ ರಸ್ತೆಯ ಹೊಂಡಗಳಿಗೆ ಬೇಸಗೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಈಗ ಮಳೆಗೆ ಮಣ್ಣು ರಾಡಿ ಎದ್ದು ಕೆಸರುಮಯವಾಗಿ ಸಂಚರಿಸಲು ಸಂಕಷ್ಟಪಡಬೇಕಾಗಿದೆ.

ರಸ್ತೆ ತುಂಬ ಹೊಂಡ-ಗುಂಡಿ

2.5 ಕಿ.ಮೀ. ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಯಷ್ಟು ಭಾಗವನ್ನು 15 ವರ್ಷಗಳ ಹಿಂದೆ ಡಾಮರು ಹಾಕಲಾಗಿದ್ದು ಇದರಲ್ಲಿ ಸುಮಾರು 100 ಮೀ.ನಷ್ಟು ಭಾಗಕ್ಕೆ 2 ವರ್ಷಗಳ ಹಿಂದೆ ಗ್ರಾಮ ವಿಕಾಸ ಯೋಜನೆಯಡಿ ಕಾಂಕ್ರೀಟ್ ಹಾಕಲಾಗಿದೆ. ಉಳಿದೆಡೆ ಡಾಮರು ಕಿತ್ತು ಹೋಗಿ ರಸ್ತೆಯುದ್ದಕ್ಕೂ ಜಲ್ಲಿಕಲ್ಲು ರಾಶಿಬಿದ್ದಿದೆ.

ಇನ್ನು, 1 ಕಿ.ಮೀ. ಉದ್ದಕ್ಕೆ ರಸ್ತೆ ಯಾವುದೇ ಅಭಿವೃದ್ಧಿ ಕಾಣದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಬೃಹತ್‌ ಹೊಂಡಗಳು ನಿರ್ಮಾಣವಾಗಿವೆ. ಈ ಕಾರಣ ವಾಹನ ಸಂಚಾರ ಅಸಾಧ್ಯವಾಗಿದೆ.

Advertisement

ಸಂಚಾರ ಸಂಕಷ್ಟ

ಈ ಭಾಗದಲ್ಲಿ ಮಲೆಕುಡಿಯ ಸಮುದಾಯದವರ ಹಾಗೂ ಇತರೆ ಸಮುದಾಯಗಳ ನೂರಾರು ಮನೆಗಳಿದ್ದು ಸಂಚರಿಸಲು ಇರುವ ಏಕೈಕ ರಸ್ತೆ ಇದಾಗಿದೆ. ಈ ರಸ್ತೆಯ ಮೂಲಕ ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುತ್ತಿದ್ದು ಕೆಸರಿನಿಂದಾಗಿ ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ತುರ್ಕೆರೆಗುಡ್ಡೆ ಭಾಗಕ್ಕೆ ರಿಕ್ಷಾ ಚಾಲಕರೂ ಹೋಗಲು ಹಿಂದೇಟು ಹಾಕುತ್ತಿದ್ದು ಇದರಿಂದಾಗಿ ಸ್ಥಳೀಯರು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ. ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸಿ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಈ ಭಾಗದ ನಾಗರಿಕರು ಮನವಿ ಮಾಡಿದ್ದಾರೆ.

ಅನುದಾನ ಒದಗಿಸುತ್ತೇವೆ

ಅಂಡಾರು ತುರ್ಕೆರೆಗುಡ್ಡೆ ರಸ್ತೆ ಅಭಿವೃದ್ದಿಗೆ ಪ್ರಾಕೃತಿಕ ವಿಕೋಪ ಪರಿಹಾರದಡಿ ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದುವೇಳೆ ಪ್ರಾಕೃತಿಕ ವಿಕೋಪದಡಿ ಅನುದಾನ ದೊರೆಯದಿದ್ದಲ್ಲಿ ಜಿಲ್ಲಾ ಪಂಚಾಯತ್‌ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅನುದಾನ ಒದಗಿಸಲಾಗುವುದು. -ಜ್ಯೋತಿಹರೀಶ್‌, ಜಿ.ಪಂ. ಸದಸ್ಯರು
Advertisement

Udayavani is now on Telegram. Click here to join our channel and stay updated with the latest news.

Next