ಮಾಂಟ್ರಿಯಲ್: ಬಿಳಿಕೆನ್ನೆಯ ಡಾನ್ಸಿಂಗ್ ಕಪ್ಪೆ, ಅಂಡಮಾನ್‌ನ ಸ್ಮೂತ್‌ಹೂಂಡ್ ಶಾರ್ಕ್ ಮತ್ತು ಹಳದಿ ಬಣ್ಣದ ಹಿಮಾಲಯನ್ ಫ್ರಿಟಿಲ್ಲರಿ ಸಸ್ಯ ಸೇರಿದಂತೆ ಒಟ್ಟು 29 ಪ್ರಭೇದಗಳನ್ನು ಭಾರತದಲ್ಲಿರುವ ಅಪಾಯದಂಚಿನ ಪ್ರಭೇದಗಳ ಪಟ್ಟಿಗೆ ಸೇರಿಸಲಾಗಿದೆ.
ಕೆನಡಾದಲ್ಲಿ ನಡೆಯುತ್ತಿರುವ ಕಾಪ್15 ಜೀವವೈವಿಧ್ಯ ಸಮಾವೇಶದಲ್ಲಿ ನಿಸರ್ಗ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ(ಐಯುಸಿಎನ್)ದ ಕೆಂಪುಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಅಕ್ರಮ ಮತ್ತು ಸುಸ್ಥಿರವಲ್ಲದ ಮೀನುಗಾರಿಕೆ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ವಿವಿಧ ರೋಗಗಳಿಂದಾಗಿ ಅಂಡಮಾನ್ ಸ್ಮೂತ್‌ಹೂಂಡ್ ಶಾರ್ಕ್‌ನಂತಹ ಜಲಚರಗಳು ನಾಶಹೊಂದುತ್ತಿವೆ. ಈ ಬೆಳವಣಿಗೆಯು ಜಗತ್ತಿನ ಜೀವವೈವಿಧ್ಯದ ಸ್ಥಿತಿಗತಿಯು ಹದಗೆಡುತ್ತಿರುವುದರ ಸೂಚಕ ಎಂದೂ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಭಾರತದಲ್ಲಿರುವ ಸುಮಾರು 9,472 ಪ್ರಭೇದಗಳ ಸಸ್ಯಗಳು, ಪ್ರಾಣಿಗಳು ಹಾಗೂ ಫಂಗೈಗಳ ಪೈಕಿ 1,355 ಪ್ರಭೇದಗಳು ಅಪಾಯದಂಚಿನಲ್ಲಿರುವುದಾಗಿ ಐಯುಸಿಎನ್ ಆಯೋಗ ತಿಳಿಸಿದೆ.
ಈಗ ಕೆಂಪುಪಟ್ಟಿಗೆ 239 ಹೊಸ ಜೀವಿಗಳು ಸೇರ್ಪಡೆಯಾಗಿದ್ದು, ಈ ಪೈಕಿ 29 ಹೆಚ್ಚಿನ ಪ್ರಮಾಣದಲ್ಲಿ ಅಪಾಯ ಎದುರಿಸುತ್ತಿದೆ ಎನ್ನಲಾಗಿದೆ. ಜಗತ್ತಿನ ಸುಮಾರು 15 ಸಾವಿರ ವಿಜ್ಞಾನಿಗಳು ಈ ಆಯೋಗದಲ್ಲಿದ್ದಾರೆ.