ಮಂಗಳೂರು: ಡ್ರಗ್ಸ್ ಪ್ರಕರಣದ ಸಂಬಂಧ ಶನಿವಾರ ಮಂಗಳೂರು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ನಟಿ ನಿರೂಪಕಿ ಅನುಶ್ರೀ, ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಪಣಂಬೂರು ಠಾಣೆಯಲ್ಲಿ ಅನುಶ್ರೀ ವಿಚಾರಣೆ ನಡೆಯಿತು. ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ, “ಪೊಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದೆಯೂ ಸಹಕಾರ ಕೊಡುತ್ತೇನೆ. ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.
ಸಿಸಿಬಿ ಹಾಗೂ ಎಕಾನಮಿಕ್ ಮತ್ತು ನಾರ್ಕೊಟಿಕ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವನೆ ಮತ್ತು ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಮತ್ತು ಅಕೀಲ್ ನೌಶೀಲ್ ನನ್ನು ಬಂಧಿಸಿದ್ದರು. ಅನಂತರ ತರುಣ್ ಎಂಬವರನ್ನು ಕೂಡ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಅನುಶ್ರೀಗೆ ಇವರ ಜತೆ ನಂಟು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ನೋಟಿಸ್ ನೀಡಲಾಗಿತ್ತು.
ಇದನ್ನೂ ಓದಿ: ಕೊಣಾಜೆ: ಅನುಮಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ, ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ
ವಿಚಾರಣೆಗೆ ಹಾಜರಾಗಲು ಸೆ.29ರ ಮೊದಲು ಹಾಜರಾಗುವಂತೆ ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದರು. ಆದರೆ ಅನುಶ್ರೀ ಸೆ.25ರಂದೇ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಪೊಲೀಸರು ಅನುಶ್ರೀ ಶುಕ್ರವಾರ ವಿಚಾರಣೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಮಾಧ್ಯಮದವರು ಕೂಡ ಎಸಿಪಿ ಕಚೇರಿ ಎದುರು ಅನುಶ್ರೀ ಆಗಮನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು. ಆದರೆ ಸಂಜೆಯವರೆಗೂ ಅನುಶ್ರೀ ವಿಚಾರಣೆಗೆ ಬಂದಿರಲಿಲ್ಲ.
ಬೆಳಗ್ಗೆಯೇ ಸಿಸಿಬಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಪಣಂಬೂರು ಠಾಣೆಗೆ ಹಾಜರಾದ ಅನುಶ್ರೀಯನ್ನು ಡಿಸಿಪಿ ವಿನಯ್ ಗಾಂವ್ ಕರ್, ಸಿಐ ಶಿವಪ್ರಕಾಶ್ ಅವರ ತಂಡ ವಿಚಾರಣೆ ನಡೆಸಿದರು.