ಸಾಗರ: ಕಾರವಾರ ಸಂಸದ ಅನಂತಕುಮಾರ್ ಹೆಗಡೆ ಮಾತು ದೇಶದ ಸಂವಿಧಾನದ ಆಶಯಗಳಿಗೆ, ಆತ್ಮಕ್ಕೆ ದ್ರೋಹ ಮಾಡುವಂತಹದ್ದು. ಸಿದ್ದರಾಮಯ್ಯ ರಾಜ್ಯಕ್ಕೆ ನೀಡಿದ ಕೊಡುಗೆ ಅತ್ಯಂತ ದೊಡ್ಡದು. ಅಂತಹವರ ಬಗ್ಗೆ ಏಕವಚನದಲ್ಲಿ ಮಾತನಾಡುವ ಅನಂತಕುಮಾರ್ ಹೆಗಡೆಗೆ ನೈತಿಕತೆಯೇ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಸದ ಅನಂತಕುಮಾರ್ ಹೆಗಡೆ ಕುಮಟಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಹುಟ್ಟಿದ ಎಲ್ಲ ಧರ್ಮಿಯರಿಗೆ, ಜಾತಿಯವರಿಗೆ ಸಮಾನವಾದ ಹಕ್ಕು ಇದೆ. ನಮ್ಮನಮ್ಮ ಧರ್ಮವನ್ನು ಆಚರಣೆ ಮಾಡುವ ಹಕ್ಕು ಸಂವಿಧಾನ ನಮಗೆ ನೀಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಧರ್ಮಿಯರೂ ತ್ಯಾಗ ಬಲಿದಾನ ಮಾಡಿದ್ದಾರೆ. ದೇಶ ಕಟ್ಟುವಲ್ಲಿ ಎಲ್ಲ ಧರ್ಮದವರದ್ದೂ ಸಮಾನ ಪಾಲು ಇದೆ. ಎಲ್ಲರೂ ಒಟ್ಟಾಗಿರುವಾಗ ಅದನ್ನು ಕದಡಿದರೆ ಅದು ದೇಶದ್ರೋಹವಾಗುತ್ತದೆ. ಅನಂತಕುಮಾರ್ ಹೆಗಡೆ ಅಂತಹ ಕೆಲಸ ಮಾಡುತ್ತಿದ್ದು ದೇಶದ್ರೋಹದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.
ಮಸೀದಿಯನ್ನು ಕೆಡವಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿರುವ ಅನಂತಕುಮಾರ್ ಹೆಗಡೆ ಮಾತು ಸಂವಿಧಾನ ವಿರೋಧಿ ಮತ್ತು ದೇಶದ್ರೋಹ ಹೇಳಿಕೆಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಅನಂತಕುಮಾರ್ ಹೆಗಡೆ ಅವರನ್ನು ದೇಶದ್ರೋಹದ ಆರೋಪದ ಮೇಲೆ ತಕ್ಷಣ ಬಂಧಿಸಿ ಜೈಲಿಗೆ ಕಳಿಸಬೇಕು. ರಾಜ್ಯದಲ್ಲಿ ಅನೇಕರು ಇಂತಹ ಪ್ರಚೋದನಕಾರಿ ಮಾತು ಆಡುತ್ತಿದ್ದಾರೆ. ಕಲ್ಕಡ್ಕ ಪ್ರಭಾಕರ್ ಭಟ್ ಸಹ ಇಂತಹದ್ದೇ ಹೇಳಿಕೆ ನೀಡಿದ್ದರು. ಇಂತಹವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳದೆ ಹೋದರೆ ಎಲ್ಲ ಕಡೆ ಇದು ವ್ಯಾಪಿಸುತ್ತದೆ ಎಂದು ಹೇಳಿದರು.
ಅನಂತಕುಮಾರ್ ಮಾನಸಿಕವಾಗಿ ಸರಿ ಇಲ್ಲ: ಈ ಕುರಿತು ಪತ್ರಿಕ್ರಿಯೆ ನೀಡಿರುವ ಶಾಸಕ ಗೋಪಾಲಕೃಷ್ಣ ಬೇಳೂರು, ಅನಂತಕುಮಾರ್ ಹೆಗಡೆಯವರಿಗೆ ಆರೋಗ್ಯ ಸರಿ ಇದ್ದಂತೆ ಕಾಣುತ್ತಿಲ್ಲ. ಮಾನಸಿಕವಾಗಿ ತೀರ ಕುಗ್ಗಿದಂತೆ ಕಾಣುತ್ತಿದ್ದಾರೆ. ಫೈರ್‌ಬ್ರಾಂಡ್ ಎಂದು ಕರೆಸಿಕೊಂಡ ಮಾತ್ರಕ್ಕೆ ಯಾರನ್ನು ಬೇಕಾದರೂ ಟೀಕೆ ಮಾಡಲು ಬರುವುದಿಲ್ಲ. ಸಂಸದರಾಗಿ ರಾಜ್ಯದ ಮುಖ್ಯಮಂತ್ರಿಯವರಿಗೆ ಯಾವ ರೀತಿ ಮಾತನಾಡಬೇಕು ಎನ್ನುವುದನ್ನು ಮೊದಲು ಹೆಗಡೆಯವರು ಕಲಿಯಲಿ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಐ.ಎನ್.ಸುರೇಶಬಾಬು, ಮಧುಮಾಲತಿ, ಸೋಮಶೇಖರ ಲ್ಯಾವಿಗೆರೆ, ಸುಮಂಗಲಾ ರಾಮಕೃಷ್ಣ, ಪರಿಮಳ, ಶ್ಯಾಮಲ ದೇವರಾಜ್, ಜ್ಯೋತಿ ಕೋವಿ, ಮಹಾಬಲ ಕೌತಿ, ಮೈಕಲ್ ಡಿಸೋಜ, ಚಂದ್ರಪ್ಪ ಎಲ್., ಕೆ.ಸಿದ್ದಪ್ಪ, ಪಾರ್ವತಿ ಬೇಸೂರು, ಹೊಳೆಯಪ್ಪ, ತುಕಾರಾಂ ಶಿರವಾಳ, ಗಿರೀಶ್ ಕೋವಿ ಇನ್ನಿತರರು ಹಾಜರಿದ್ದರು.