ಕಾರವಾರ: ನಾಲ್ಕು ವರ್ಷ ನಿದ್ರೆಯಲ್ಲಿದ್ದ ಸಂಸದ ಅನಂತ ಕುಮಾರ್ ಕೋಮುದ್ವೇಷ ಹರಡುವ ಮಾತಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾಡಿದ ಅಭಿವೃದ್ಧಿ ಕೆಲಸ ಜನರ ಮುಂದಿಡುವ ಬದಲು ಭಾವನೆ ಕೆರಳಿಸುವ, ಮುಖ್ಯಮಂತ್ರಿಗೆ ಅನಾಗರಿಕ ಭಾಷೆ ಬಳಸುವ ಮೂಲಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಟೀಕಿಸಿದರು.
ಕಾರವಾರದ ಪತ್ರಿಕಾಭವನದಲ್ಲಿ ರವಿವಾರ ಸುದ್ದಿಗೋಷ್ಟಿ ಮಾಡಿದ ಅವರು ಸಂಸದ ಅನಂತ ಕುಮಾರ್ ಹೆಗಡೆಗೆ ಋಣ ತೀರಿಸುವ ಹಂಬಲ ಇದ್ದರೆ ಶಾಸಕ ಚಿತ್ತರಂಜನ್ ಕೊಲೆ ಮಾಡಿದವರನ್ನು ಹಿಡಿದು ಋಣ ತೀರಸಲಿ. ತಿಮ್ಮಪ್ಪ ನಾಯ್ಕ ಹತ್ಯೆ ಮಾಡಿದವರನ್ನು ಹಿಡಿಯಲು ಹೋರಾಟ ಮಾಡಲಿ. ಚುನಾವಣೆ ಬಂದಾಗ ಮಾತ್ರ ಪರೇಶ್ ಮೇಸ್ತಾನನ್ನು ನೆನಪಿಸಿಕೊಳ್ಳುವುದಲ್ಲ. ಸಹಜ ಸಾವೆಂದು ಸಿಬಿಐ ಬಿ ರಿಪೋರ್ಟ್ ನೀಡಿದ ನಂತರ, ಮೇಸ್ತಾ ಕುಟುಂಬಕ್ಕೆ ಸಂಸದರು ನೆರವಾದರೆ? ಎಂದು ಕಾಂಗ್ರೆಸ್ ವಕ್ತಾರರು ಪ್ರಶ್ನಿಸಿದರು.
ಶಾಂತಿ ಕದಡುವುದು, ಮುಸಲ್ಮಾನರ ಮಸೀದಿ ದ್ವೇಷ ಮಾಡುವ ಅನಂತ ಕುಮಾರ್, ಉಳಿದ ದಿನಗಳಲ್ಲಿ ಅವರ ಜೊತೆ ವ್ಯಾಪಾರ ವಹಿವಾಟು ಮಾಡುತ್ತಾರೆ. ಇದು ಜಿಲ್ಲೆಯ ಜನರಿಗೆ ಗೊತ್ತಿಲ್ಲ ಎಂದು ಅವರು ಭಾವಿಸಿದ್ದಾರೆ. ಸಂಸದರ ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ನಮಗೂ ಕನಿಕರ ಇತ್ತು. ಆದರೆ ಅವರ ಧಿಡೀರ್ ಆಗಮನ ನೋಡಿದರೆ, ಬಳಸುವ ಭಾಷೆ ಗಮನಿಸಿದರೆ ಅವರ ಮತ್ತೊಂದು ಮುಖ ಗೊತ್ತಾಗಿದೆ. ದ್ವೇಷ, ಸೇಡು ಉಗುಳುವ ಹೆಗಡೆ ,ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ, ಸಂಜಯ್ ಗಾಂಧಿ ಬಗ್ಗೆ ಎಷ್ಟೊಂದು ದ್ವೇಷ ಇದೆ ಎಂದು ಕಾಣುತ್ತಿದೆ. ಮಸೀದಿ ಹಾಗೂ ಗಾಂಧಿ ಕುಟುಂಬ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ದ್ವೇಷವನ್ನು ಹೊರಹಾಕಿದ್ದು,ಈ ಮನುಷ್ಯ ಸೇಡನ್ನು ಉಸಿರಾಡುವುದು ಸಾಬೀತಾಗಿದೆ ಎಂದರು.
ಪ್ರಧಾನಿ ಮೋದಿ ಉತ್ತರ ಕನ್ನಡ ಜಿಲ್ಲೆಗೆ ಬಂದಾಗ ಅವರ ಜೊತೆ ವೇದಿಕೆ ಹಂಚಿಕೊಳ್ಳದ, ತನ್ನದೇ ಪಕ್ಷದ ಶಾಸಕರ ಪರ ಕಳೆದ ಚುನಾವಣೆಯಲ್ಲಿ ಕೆಲಸ ಮಾಡದ ಸಂಸದ, ಜಿಲ್ಲೆಯ ಸಮಸ್ಯೆ ಬಗ್ಗೆ ಧ್ವನಿ ಎತ್ತಿದವರೇ ಅಲ್ಲ. ಇಂತಹ ಸಂಸದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕೆಟ್ಟ ಭಾಷೆ ಬಳಸಿ, ದ್ವೇಷ ಭಾಷಣ ಮಾಡಿದ ಕಾರಣಕ್ಕೆ ಇವರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆಗ್ರಹಿಸಿದರು .