Advertisement

“ಅನಂತ’ಗೆಲುವಿಗೆ “ಆನಂದ’ದ ಅಡ್ಡಗಾಲು?

03:30 AM Apr 14, 2019 | Team Udayavani |

ಕಾರವಾರ: ಕರಾವಳಿ, ಮಲೆನಾಡು, ಬಯಲುಸೀಮೆ ಪ್ರದೇಶಗಳನ್ನು ಹೊಂದಿರುವ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಮಧ್ಯೆ ಮಾತಿನ ಚಕಮಕಿ ಜೋರಾಗಿಯೇ ಇದೆ.

Advertisement

ಗೆಲುವಿಗಾಗಿ ಇಬ್ಬರೂ ನಾಯಕರು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದು, ಅನಂತ ಕುಮಾರ್‌ ಹೆಗಡೆಯವರು 6ನೇ ಬಾರಿಗೆ ಸಂಸತ್‌ ಪ್ರವೇಶಿಸುವುದನ್ನು ಅಸ್ನೋಟಿಕರ್‌ ತಡೆಯುವರೇ ಎಂಬುದು ಕುತೂಹಲದ ಪ್ರಶ್ನೆ.

ಹಿಂದುತ್ವದ ಪ್ರತಿಪಾದಕ: ಸಚಿವರಾದ ಬಳಿಕ, ಕಳೆದು ಒಂದು ವರ್ಷದಿಂದ ಹೆಗಡೆಯವರು ಜನರ ಬಳಿ ಬರತೊಡಗಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಕೆಲಸವನ್ನು ಬಿಜೆಪಿ ಅವರಿಗೆ ನೀಡಿತ್ತು. ಆ ತಂತ್ರಗಾರಿಕೆ ಯಶಸ್ಸು ಕಂಡಿತು.

ಮೂರು ವಿಧಾನಸಭಾ ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಕಮಲ ಪಡೆ, ಮೋದಿ ಅಲೆ, ಹಿಂದುತ್ವ, ರಾಷ್ಟ್ರಭಕ್ತಿಯ ತಂತ್ರಗಳನ್ನು ಬಳಸುತ್ತಿದೆ. ವಿವಾದಾತ್ಮಕ ಹೇಳಿಕೆಗಳು ಹೆಗಡೆಯವರಿಗೆ ಸಾಕಷ್ಟು ಪ್ರಚಾರ ಪಡೆಯಲು ಸಹಾಯವಾಗಿವೆ. ಹೀಗಾಗಿ, ಈ ಸಲವೂ ಗೆಲುವು ಅತ್ಯಂತ ಸರಳ ಎಂಬುದು ಹೆಗಡೆಯವರ ಆಶಾಭಾವ.

ಸಂಸದರ ಹೇಳಿಕೆಗಳೇ ಮೈತ್ರಿಗೆ ಪ್ಲಸ್‌ ಪಾಯಿಂಟ್‌: ಜೆಡಿಎಸ್‌ನಿಂದ ಆನಂದ ಅಸ್ನೋಟಿಕರ್‌ ನಿರೀಕ್ಷೆಯಂತೆ ಟಿಕೆಟ್‌ ಪಡೆದಿದ್ದು, ಕಾಂಗ್ರೆಸ್‌ ನಾಯಕರ ವಿಶ್ವಾಸ ಗಳಿಸಲು ಪ್ರತಿ ತಾಲೂಕಿನಲ್ಲಿ ಮುಖಂಡರ ಸಭೆ ನಡೆಸುತ್ತಿದ್ದಾರೆ.

Advertisement

ವೈದ್ಯರ ಮೇಲೆ ಸಚಿವ ಹೆಗಡೆ ನಡೆಸಿದ ಹಲ್ಲೆ ಪ್ರಕರಣ, ಅಭಿವೃದ್ಧಿ ಕಡೆಗಿನ ಸಂಸದರ ನಿರ್ಲಕ್ಷ್ಯ, ಸಂಸದರ ಸಂವಿಧಾನ ವಿರೋಧಿ ಹೇಳಿಕೆಗಳು, ರೈತರ ಸಮಸ್ಯೆಗೆ ಸ್ಪಂದನೆ ಇಲ್ಲ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗದ ಕನಸು ನನಸಾಗಿಲ್ಲ, ಕೈಗಾ 5-6ನೇ ಘಟಕಗಳ ಬಗ್ಗೆ ಚಕಾರ ಎತ್ತಿಲ್ಲ ಎಂಬ ಆರೋಪಗಳು ಜೆಡಿಎಸ್‌ಗೆ ಪ್ರಮುಖ ಅಸ್ತ್ರಗಳಾಗಿವೆ.

ಹೊನ್ನಾವರ, ಭಟ್ಕಳ, ಕುಮಟಾ, ಶಿರಸಿ, ಮುಂಡಗೋಡದಲ್ಲಿ ಬಿಜೆಪಿ ಬಲ ಮುರಿಯಲು ಕಾಂಗ್ರೆಸ್‌-ಜೆಡಿಎಸ್‌ ಒಂದಾಗಿವೆ. ಸಚಿವ ದೇಶಪಾಂಡೆಯವರಿಗೆ ಮೈತ್ರಿ ಮನಸ್ಸಿಲ್ಲದಿದ್ದರೂ, ಸುನೀಲ್‌ ಹೆಗಡೆಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಕ್ಲೃಕರ್‌ಗೆ ಎದುರೇಟು ನೀಡಲು ಸಿದ್ಧರಾಗಿದ್ದಾರೆ.

ಖಾನಾಪುರದಲ್ಲಿ ಶಾಸಕಿ ಅಂಜಲಿ ನಿಂಬಾಳಕರ್‌ ಮೈತ್ರಿಗೆ ನಿಷ್ಠರಾಗಿದ್ದಾರೆ. ಕಿತ್ತೂರಿನಲ್ಲಿ ಬಿಜೆಪಿಯ ಒಳಜಗಳವನ್ನು ಬಳಸಿಕೊಳ್ಳಲು ಮೈತ್ರಿ ಅಭ್ಯರ್ಥಿ ಮುಂದಾಗಿದ್ದಾರೆ. ಜೊತೆಗೆ, ಕಾರವಾರದವರಿಗೆ ಅಸ್ನೋಟಿಕರ್‌ ಊರಿನವನು ಎಂಬ ಅಭಿಮಾನವಿದೆ.

ಕ್ಷೇತ್ರವ್ಯಾಪ್ತಿ: ಕೆನರಾ ಲೋಕಸಭಾ ಕ್ಷೇತ್ರ, 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ, ಜೋಯಿಡಾ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ತಾಲೂಕುಗಳ ಕ್ಷೇತ್ರವ್ಯಾಪ್ತಿ ಇದೆ. ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಕಿತ್ತೂರಿನಲ್ಲಿ ಬಿಜೆಪಿ ಶಾಸಕರಿದ್ದರೆ, ಯಲ್ಲಾಪುರ, ಹಳಿಯಾಳ, ಖಾನಾಪುರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಕಣ ಚಿತ್ರಣ: 1951ರಿಂದ 2014ರವರೆಗೆ ನಡೆದ 16 ಲೋಕಸಭಾ ಚುನಾವಣೆಗಳ ಪೈಕಿ ಹತ್ತು ಸಲ ಕಾಂಗ್ರೆಸ್‌ ಗೆದ್ದಿದೆ. 1 ಸಲ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. 5 ಸಲ ಬಿಜೆಪಿ ಗೆದ್ದಿದೆ. ಈ ಬಾರಿ ಬಿಜೆಪಿಯ ಅನಂತ ಕುಮಾರ್‌ ಹೆಗಡೆ ಮತ್ತು ಜೆಡಿಎಸ್‌ನ ಆನಂದ ಅಸ್ನೋಟಿಕರ್‌ ಮಧ್ಯೆ ನೇರ ಸ್ಪರ್ಧೆ ಇದೆ. ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿಲ್ಲ. 1996 ಮತ್ತು 1998 ಹಾಗೂ 2004 ರಿಂದ ಬಿಜೆಪಿ ಸತತವಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದೆ.

1999 ರಿಂದ 2003ರವರೆಗೆ ಕಾಂಗ್ರೆಸ್‌ನ ಮಾರ್ಗರೇಟ್‌ ಆಳ್ವಾ ಸಂಸದರಾಗಿದ್ದರು. ಅವರು ಜಿಲ್ಲೆಯಿಂದ ಲೋಕಸಭೆಗೆ ತೆರಳಿದ ಏಕೈಕ ಮಹಿಳಾ ಸಂಸದೆ. 2004ರಿಂದ ಹೆಗಡೆಯವರು ಸತತವಾಗಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡುತ್ತಿದ್ದಾರೆ. ಉಳಿದಂತೆ, ಬಿಎಸ್ಪಿ, ಪಕ್ಷೇತರರು ಸೇರಿ 11 ಜನ ಕಣದಲ್ಲಿದ್ದಾರೆ.

ಮತದಾರರರು
ಒಟ್ಟು: 15,34,036 .
ಮಹಿಳೆಯರು: 5,63,570.
ಪುರುಷರು: 5,76,738.
ಇತರರು: 20.

ಜಾತಿವಾರು ಲೆಕ್ಕಾಚಾರ
ಮರಾಠರು – 1,85,000.
ನಾಮಧಾರಿ – 1,38,000.
ಹವ್ಯಕ, ಗೌಡ ಸಾರಸ್ವತ, ದೇಶಸ್ತ ಬ್ರಾಹ್ಮಣ – 1,35,000.
ಮುಸ್ಲಿಮರು – 1, 75,000.
ಕ್ರಿಶ್ಚಿಯನ್‌ – 65,000.
ಲಿಂಗಾಯತರು – 1,30,000.
ಹಾಲಕ್ಕಿ ಒಕ್ಕಲಿಗರು, ಪಟಗಾರರು – 1,30,000.

* ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next