Advertisement

Ananthnag: ಅನಂತ ಅಮೃತ: ಬಯಲು ದಾರಿಯ ಪಯಣ ಅನಂತ

11:03 PM Sep 02, 2023 | Team Udayavani |

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಹೀರೋ ಅನಂತನಾಗ್‌ ಅವರಿಗೆ ಈಗ ಅಮೃತಕಾಲ. ಚಿತ್ರರಂಗಕ್ಕೆ ಪ್ರವೇಶಿಸಿ ಐದು ದಶಕಗಳಾಗಿವೆ. ವಿವಿಧ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅವರು ಪಾತ್ರಗಳ ಪಕ್ಷಪಾತಿ. ತಾನೊಪ್ಪಿಕೊಂಡದ್ದನ್ನು ಸಮರ್ಥವಾಗಿ ಜವಾಬ್ದಾರಿಯಿಂದ ನಿರ್ವಹಿಸುವವನೇ ಹೀರೋ ಎಂಬುದು ಅನಂತರ ಅಭಿಪ್ರಾಯ. ಅಂಥವರೇ ನಮ್ಮ ಈ ಅನಂತ್‌!

Advertisement

ಬಯಲುದಾರಿ
1976 ರಲ್ಲಿ ಕನ್ನಡದ ವಾಣಿಜ್ಯಾತ್ಮಕ ಸಿನೆಮಾಗಳಿಗೆ ಒಬ್ಬ ನಟನನ್ನು ಪರಿಚಯಿಸಿದ ಚಿತ್ರ. ಭಟ್ಕಳದ ಶಿರಾಲಿಯ ಊರಿನ ಅನಂತ ನಾಗರಕಟ್ಟೆ (ಅನಂತನಾಗ್‌) ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಆಕಾಶದಿಂದ (ಹೆಲಿಕಾಪ್ಟರ್‌ನಲ್ಲಿ ಬರುವ ಸನ್ನಿವೇಶ ಈ ಸಿನೆಮಾದಲ್ಲಿ) ಕೆಳಗಿಳಿದು ಬಂದವರು.

ಎಂದಿಗೂ ಅನಂತನಾಗ್‌ ನಟಿಸಿದವರಲ್ಲ; ಪಾತ್ರಗಳಾದವರು. ಹಾಗೆ ನೋಡುವುದಾದರೆ ಅನಂತರು ರಂಗ ಮತ್ತು ಚಿತ್ರರಂಗಕ್ಕೆ ಪ್ರವೇಶಿಸಿದ್ದೇ ಪಾತ್ರಗಳಾಗಲೇ ವಿನಾ, ನಾಯಕನಾಗಿ ವಿಜೃಂಭಿಸಲಲ್ಲ! ಇದಕ್ಕೆ ಒಪ್ಪುವ ಮಾತು ಹಲವು ಬಾರಿ, ಹಲವು ಸಂದರ್ಶನಗಳಲ್ಲಿ ಸ್ವತಃ ಅನಂತರೇ ವ್ಯಕ್ತಪಡಿಸಿದ್ದಾರೆ ಕೂಡ. ಈ ವರ್ಚಸ್ಸು (ಇಮೇಜ್‌) ಪ್ರತೀ ನಟನೂ ತನ್ನ ಸೃಷ್ಟಿಯಾಗಿರುವ ಪ್ರಭಾವಳಿ ಎಂದುಕೊಂಡಿರುತ್ತಾನೆ. ಅದು ಪ್ರಭಾವಳಿಯಲ್ಲ; ಜೇಡನ ಬಲೆ. ಹಲವು ಬಾರಿ ನಮ್ಮ ನಾಯಕ ನಟರು ಈ ಬಲೆಯೊಳಗೆ ಸಿಲುಕಿಕೊಂಡು ಬಿಡುತ್ತಾರೆ, ತಾನೇ ಹೆಣೆದ ಬಲೆಯೊಳಗೆ ಸಿಲುಕಿ ಹತಾಶಗೊಳ್ಳುವ ಜೇಡದಂತೆ. ಆ ದೃಷ್ಟಿಯಲ್ಲಿ ಅನಂತರು ಆ ಇಡೀ ಪ್ರಕ್ರಿಯೆಯಿಂದಲೇ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವು ದೂರ ಇರಿಸಿಕೊಂಡಿದ್ದರು. ಹಾಗಾಗಿ ಇದು ಎಂದೋ ಬೋಧವಾದುದಲ್ಲ; ಬದಲಾಗಿ ಆ ಅರಿವಿನ ಕಿಡಿಯ ಸಖ್ಯ.

1975 ರಲ್ಲಿ ಜಿ.ವಿ ಅಯ್ಯರ್‌ ನಿರ್ದೇಶಿಸಿ, ತ.ರಾ.ಸು ರಚಿಸಿದ ಹಂಸಗೀತೆಯ ಚಿತ್ರದ ಭೈರವಿ ವೆಂಕಟಸುಬ್ಬಯ್ಯ ಎಲ್ಲಿ? ಮರುವರ್ಷವೇ ಬಿಡುಗಡೆಗೊಂಡು ಸೂಪರ್‌ ಹಿಟ್‌ ಆದ ಬಯಲುದಾರಿಯ ಹೆಲಿಕಾಪ್ಟರ್‌ನ ಪೈಲಟ್‌ ಎಲ್ಲಿ? ಎರಡೂ ಅಜಗಜಾಂತರ. ವಿಚಿತ್ರ ಮತ್ತು ವಿಶೇಷವೆಂದರೆ ಎರಡೂ ಪಾತ್ರಗಳು ಗೆದ್ದವು. ಒಂದು ರಾಷ್ಟ್ರೀಯ ಪ್ರಶಸ್ತಿ ಪಡೆದು ಜೈ ಎಂದಿತು. ಮತ್ತೂಂದು ಜನಮನ್ನಣೆ ಗಳಿಸಿತು.

1970 ರಿಂದ 2023ರ ವರೆಗೂ ಅವರ ಅಭಿವ್ಯಕ್ತಿ ವಿಭಿನ್ನ ಆಯಾಮಗಳಲ್ಲಿ, ಲಯಗಳಲ್ಲಿ ಹರಿದು ಬಂದಿದೆ. “ಆಗ (1970-90 ರ ದಶಕ) ನಿರ್ದೇಶಕರು, ಸಾಹಿತಿಗಳು ತಮ್ಮ ಪಾತ್ರಗಳಿಗೆ ಕಲಾವಿದರನ್ನು ಹುಡುಕುತ್ತಿದ್ದರು. ಹಾಗಾಗಿ ನನಗೆ ಒಳ್ಳೆಯ ಪಾತ್ರಗಳು ಸಿಕ್ಕವು’ ಎಂದು ಅನಂತನಾಗ್‌ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ ಮಾತು ಇನ್ನೂ ನೆನಪಿದೆ.

Advertisement

ಐದೂವರೆ ದಶಕಗಳ ತಮ್ಮ ಚಿತ್ರಬದುಕಿನಲ್ಲಿ ಅನಂತರು ನಟಿಸದ ಪಾತ್ರವಿಲ್ಲ. ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ ಸಿನೆಮಾಗಳಲ್ಲಿ ನಟಿಸಿದರು. ಹಿರಿಯ ನಿರ್ದೇಶಕ ಶ್ಯಾಮ್‌ ಬೆನಗಲ್‌ರ ಮಂಥನ್‌, ಅಂಕುರ್‌, ನಿಶಾಂತ್‌ ನಂಥ ಚಿತ್ರಗಳಲ್ಲಿ ನಟಿಸಿದ ಅನಂತ್‌ ಬಯಲುದಾರಿ, ನಾನಿನ್ನ ಬಿಡಲಾರೆ, ಚಂದನದ ಗೊಂಬೆಯಲ್ಲೂ ನಟಿಸಿ ಅಭಿಮಾನಿಗಳ ಮನಗೆದ್ದರು. ಅದೇ ಅನಂತ್‌ ಮಿಂಚಿನ ಓಟದಲ್ಲಿ ಪ್ರಶಸ್ತಿ ಪಡೆದು, ನಾರದ ವಿಜಯ, ಹಾಸ್ಯರತ್ನ ರಾಮಕೃಷ್ಣ, ಬರ, ಹೊಸನೀರು, ಆ್ಯಕ್ಸಿಡೆಂಟ್‌, ಅವಸ್ಥೆಯಂಥ ಸಮಕಾಲೀನ ಸಮಸ್ಯೆಗಳ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದರು. ಮನೆಯೇ ಮಂತ್ರಾಲಯ, ಭಕ್ತ ಪ್ರಹ್ಲಾದ, ಶ್ರೀ ವೆಂಕಟೇಶ್ವರ ಮಹಿಮೆಯಲ್ಲೂ ಅಭಿನಯಿಸಿದರು.

1990 ರ ಸಂದರ್ಭ. ಸರಕಾರಗಳು, ಅವುಗಳ ಜನಪರ ಯೋಜನೆಗಳು, ಮಧ್ಯಮ ವರ್ಗದಲ್ಲಿ ಚಿಗುರೊಡೆಯುತ್ತಿದ್ದ ಸುಭದ್ರತೆಯ ಕನಸುಗಳು, ಅದನ್ನು ಬಳಸಿಕೊಂಡು ಬೆಳೆಯಲು ಪ್ರಯತ್ನಿಸುವವರು… ಹೀಗೆ ಸಮಾಜದಲ್ಲೂ ಹಲವು ಪಾತ್ರಗಳು ಬದಲಾಗತೊಡಗಿದವು. ಆಗ ಹಾಸ್ಯದ ಲೇಪನ ಹೊಂದಿದ್ದರೂ ವ್ಯವಸ್ಥೆಯ ಲೋಪವನ್ನು ಹೇಳುತ್ತಾ, ಸಮಾಜದಲ್ಲಿ ನಡೆಯುವ ವಂಚನೆಯನ್ನು, ಅವಕಾಶವಾದಿತನವನ್ನು ಬಿಂಬಿಸುವ ಪ್ರಯತ್ನ ಸಿನೆಮಾಗಳಲ್ಲಿ ನಡೆಯಿತು. ಉದ್ಭವ, ಗೋಲ್‌ಮಾಲ್‌ ರಾಧಾಕೃಷ್ಣ, ಉಂಡೂ ಹೋದ ಕೊಂಡೂ ಹೋದ ದಂಥ ಚಿತ್ರಗಳಲ್ಲಿ ಅನಂತರು ಋಣಾತ್ಮಕ ನೆಲೆಯ ಪಾತ್ರಗಳಲ್ಲೂ ನಟನೆಯನ್ನು ಮೆರೆಸಿದರು. ಹಾಗೆಯೇ ಗಣೇಶನ ಮದುವೆ, ಗೌರಿ ಗಣೇಶ, ಹೆಂಡ್ತಿಗೇಳ್ಬೇಡಿ, ಮನೇಲಿ ಇಲಿ, ಬೀದೀಲಿ ಹುಲಿ… ಎಲ್ಲದರಲ್ಲೂ ಪಾತ್ರಗಳೇ ಆದದ್ದು, ಬೆಳಂದಿಂಗಳ ಬಾಲೆಯಲ್ಲೂ ಚದುರಂಗ ಪಟು ರೇವಂತನಾಗಿಯೇ ಜನರಿಗೆ ಇಷ್ಟವಾದದ್ದೇ ಹೊರತು ಅನಂತರಾಗಿ ಅಲ್ಲವೇ ಅಲ್ಲ. ಇತ್ತೀಚಿನ ವರ್ಷಗಳ ಪಂಚರಂಗಿ, ವಾಸ್ತು ಪ್ರಕಾರ, ಗೋಧಿ ಬಣ್ಣ ಸಾಧಾರಣ ಮೈಕಟ್ಟು , ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಂಥ ಚಿತ್ರಗಳಲ್ಲೂ ಅನಂತರು ಆಪ್ತವಾಗಿದ್ದು ಅದೇ ಕಾರಣಕ್ಕಾಗಿ.

“ನಾನು ಮೊದಲು ಚಿತ್ರಕಥೆಯನ್ನು ಚೆನ್ನಾಗಿ ಓದುತ್ತೇನೆ. ನನ್ನ ಪಾತ್ರದ ಪ್ರಾಮುಖ್ಯ ಆಧರಿಸಿ ನಿರ್ಧರಿಸುತ್ತೇನೆ. ಅಂದರೆ ನನಗೆ ಅಲ್ಲಿ ಅಭಿವ್ಯಕ್ತಿಸಲು ಅವಕಾಶ ಇರಬೇಕು’ ಎಂಬ ಅವರ ಮಾತು, ಅನಂತರು ಪಾತ್ರಗಳನ್ನು ಪ್ರೀತಿಸುವ ಬಗೆಯನ್ನು ಹೇಳುತ್ತದೆ. ಅನಂತರಿಗೆ ತನ್ನ ಪಾತ್ರ ಎಷ್ಟು ಹೊತ್ತು ತೆರೆಯ ಮೇಲಿರುತ್ತದೆ ಎನ್ನುವುದು ಮುಖ್ಯವಲ್ಲವೇ ಅಲ್ಲ, ಅದು ಏನು ಹೇಳುತ್ತದೆ ಎಂಬುದಷ್ಟೇ. ಒಬ್ಬ ಪರಮ ಕಲಾವಿದನ ನೈಜ ಆದ್ಯತೆ ಇದೇ.

ಇತ್ತೀಚಿನ ಚಿತ್ರಗಳಲ್ಲಿನ ಕೆಲವು ಪಾತ್ರಗಳು ಇಂಥ ಹಿರಿಯ ನಟನಿಗೆ ಚಿಕ್ಕವು ಎನಿಸಿದ್ದು ಪ್ರೇಕ್ಷಕರಿಗೆ ಹೊರತು, ಅನಂತರಿಗಲ್ಲ. ಅವರು ಆ ಸಣ್ಣ ಪಾತ್ರಗಳನ್ನೂ ಕಲೋಪಾಸಕನಂತೆ ಸ್ವೀಕರಿಸಿ ಮೆರೆಸಿದ್ದಾರೆ. ಇದಕ್ಕೆ ಹಲವು ಚಿತ್ರಗಳನ್ನು ಉದಾಹರಿಸಬಹುದು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಅಂದಿನಿಂದ ಇಂದಿನವರೆಗೂ ಅನಂತ್‌ನಾಗ್‌ ಹೀರೋವಾಗಿಯೇ ಉಳಿದಿದ್ದಾರೆ, ಸದಾ ಯಂಗ್‌ ಹೀರೋಯಿನ್‌ ಜತೆ ಡ್ಯುಯೆಟ್‌ ಹಾಡದೆಯೂ! ಈ ಚಿತ್ರದಲ್ಲಿ ಅನಂತರಿದ್ದಾರೆ ಎಂದರೆ “ಒಮ್ಮೆ ನೋಡುವ’ ಎಂದು ಥಿಯೇಟರ್‌ಗೆ ಹೊರಡುವವರು ಇಂದಿಗೂ ಇದ್ದಾರೆ.
ಮಧ್ಯಮ ವರ್ಗದ ಪ್ರತಿನಿಧಿಯಂತೆಯೇ ಬಿಂಬಿತವಾಗಿದ್ದ ಅನಂತರು, ನದಿಯೊಂದು ತನ್ನ ದಾರಿಯನ್ನು ತಾನೇ ಮಾಡಿಕೊಂಡು ಹರಿದು ಹೋದ ಹಾಗೆ. ಅದು ಗುಡ್ಡವೋ, ಇಳಿಜಾರೋ ಕಂಡು ಆಯ್ಕೆ ಮಾಡಿಕೊಳ್ಳಲಿಲ್ಲ. ಹಾಗಾಗಿ ನಿಂತ ನೀರಾಗಲಿಲ್ಲ.

ಅಭಿವ್ಯಕ್ತಿಯೇ ನಮ್ಮ ಆದ್ಯತೆಯಾಗಿ ಬಿಟ್ಟರೆ ಎಂದಿಗೂ ಆಯ್ಕೆಗಳು ದೊಡ್ಡ ಸವಾಲೆನಿಸದು. ಯಾವ ಪಾತ್ರಗಳೂ ಸಣ್ಣದು ಎಂದೆನಿಸವು, ಅಮುಖ್ಯವೆನಿಸವು. ಸಿಕ್ಕ ಪಾತ್ರಗಳಲ್ಲಿ ಜೀವ ತುಂಬಿ ಇಡೀ ತೆರೆಯನ್ನು ಆವರಿಸಿಕೊಳ್ಳುವಂತೆ ಮಾಡಲು ಸಾಧ್ಯ ಎಂದು ಸಾಬೀತು ಪಡಿಸಿದವರೂ “ನಮ್ಮ ಅನಂತರೇ’.

ಈಜುಪಟುವಿಗೆ ಈಜುವುದೇ ಅತ್ಯಂತ ಸಂತೋಷ, ಉಲ್ಲಾಸ ತರುವಂಥ ಚಟುವಟಿಕೆ ಎನಿಸಿದರೆ, ಆತ ಬಾವಿ,ಹೊಳೆ, ಸಮುದ್ರ ಎಂದು ನೋಡುವುದಿಲ್ಲ. ಹಾಗೆಯೇ ಒಬ್ಬ ಅಪ್ಪಟ ಕಲಾವಿದನಿಗೆ ತೆರೆ ಯಾವುದಾದರೇನು? ಬೆಳ್ಳಿಯೂ ಒಂದೇ, ಕಿರುತೆರೆಯೂ ಒಂದೇ. ಅಂದ ಹಾಗೆ ಶಂಕರನಾಗ್‌ ನಿರ್ದೇಶನದ ಮಾಲ್ಗುಡಿ ಡೇಸ್‌ ನಲ್ಲೂ ನಟಿಸಿದ ಅನಂತರನ್ನು ಜನ ಪ್ರೀತಿಸಿದರೆಂಬುದು ಸುಳ್ಳಲ್ಲವಲ್ಲ.

ಪಾತ್ರಗಳು ಮೆರೆದವು, ಅನಂತರು ಅವುಗಳ ಹಿಂದೆ ನಿಂತು ಸಂಭ್ರಮಿಸಿದರು. ಇನ್ನೊಂದು ಅವರದ್ದೇ ಮಾತು-“ಒಂದು ಪಾತ್ರವನ್ನು ಅರ್ಥ ಮಾಡಿಕೊಂಡು ತನ್ನನ್ನು ತಾನು ಆ ಪಾತ್ರವಾಗಿ ರೂಪಾಂತರಿಸಿಕೊಳ್ಳುವ ಪ್ರಕ್ರಿಯೆಗೆ ಬುದ್ಧಿವಂತಿಕೆ ಬೇಕು. ಆದರೆ ಆ ಪಾತ್ರವಾಗಿ ಅಭಿವ್ಯಕ್ತಿಸುವಾಗ ಸ್ವಾಭಾವಿಕತೆ ಬೇಕು’. ಅನಂತರ ಆ ಪ್ರಯತ್ನ ಪ್ರತೀ ಪಾತ್ರದಲ್ಲೂ ನಿಚ್ಚಳವಾಗಿ ಕಾಣುತ್ತದೆ. ಪಾತ್ರಗಳಿಗೆ ವೈವಿಧ್ಯ ಬರುವುದು ರಚಿಸಿದವನಿಂದಲೋ, ಅಭಿನಯಿಸಿದವನಿಂದಲೋ ಎಂಬಂತೆಯೇ ಆ ಪಾತ್ರವನ್ನು ಆಯಾ ನಟ ಅನುಭವಿಸಿದಾಗಲೋ? ಅನುಸರಿಸಿದಾಗಲೋ ಎಂಬ ಮಾತನ್ನು ಮುಂದಿಟ್ಟುಕೊಂಡರೆ, ಅನುಭವಿಸಿದಾಗ ಎನ್ನುವ ವರ್ಗಕ್ಕೆ ಅನಂತರು ಸೇರುತ್ತಾರೆ. ಅದಕ್ಕೆ ಅವರ ರಂಗದೊಂದಿಗಿನ ಒಲವೂ ಕಾರಣವಿರಬಹುದು. ಪಾತ್ರದೊಳಗಿನ ತಾದಾತ್ಮéವನ್ನು ಸಾಧಿಸುವುದು ಖಂಡಿತ ಸಣ್ಣ ಕೆಲಸವಲ್ಲ. ಯಾಕೆಂದರೆ ಈಗಿನ ಹಲವು ಸಿನೆಮಾಗಳಲ್ಲಿ ನಟರನ್ನೂ ಬದಿಗೆ ಸರಿಸಿರುವ ಲಾಂಗುಗಳನ್ನು ಕಂಡಾಗ, ಅವುಗಳೇ ಪಾತ್ರಗಳಂತೆ ಶೋಭಿಸುತ್ತಿರುವಾಗ ಪಾತ್ರವೇ ಆಗುವುದು ಸುಲಭದ ಮಾತಲ್ಲವಲ್ಲ.

ಒಂದು ದಾರಿಯ ತುದಿ ಬಯಲು, ಅದರ ಆದಿಯೂ ಅದೇ ದಾರಿಯ ಮತ್ತೂಂದು ತುದಿ. ಪಾತ್ರಗಳ ಮೂಲಕ ಅನ್ವೇಷಣೆಗೆ ತೊಡಗಿದಾಗ ಆ ದಾರಿಯೇ ಬಯಲಾಗುತ್ತದೆ. ಎರಡೂ ಸ್ವಾಭಾವಿಕ ಪ್ರಕ್ರಿಯೆ. ಅನಂತರು ಹಾಗೆಯೇ ಆದವರು- ಅತ್ಯಂತ ಸ್ವಾಭಾವಿಕವಾಗಿ.

ಎಷ್ಟು ಖುಷಿಯ ವಿಷಯ ನೋಡಿ. ಅನಂತರ ಚಿತ್ರ ಬದುಕಿನಲ್ಲಿ ಬಯಲು ಹಾಗೂ ದಾರಿ ಎರಡೂ ವಿಜೃಂಭಿಸಿದವು!

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next