ಮಂಗಳೂರು: ಭಾರತ್ ಗ್ರೂಪ್ ಆಫ್ ಕಂಪೆನಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ್ ಜಿ. ಪೈ ಅವರು ಉದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹಾನ್ ಸಾಧಕ. ಬೀಡಿ ಕಾರ್ಮಿಕರು ಸೇರಿದಂತೆ ಸರ್ವ ವಿಭಾಗದ ಕಾರ್ಮಿಕ ವರ್ಗದ ಸ್ನೇಹಿಯಾಗಿ ಅವರು ನಡೆದ ಹಾದಿ ಸರ್ವರಿಗೂ ಮಾದರಿ ಎಂದು ನಿಟ್ಟೆ ವಿವಿಯ ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅನಂತ್ ಜಿ. ಪೈ ಅವರ ನಿಧನ ಹಿನ್ನೆಲೆಯಲ್ಲಿ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್ (ಎಚ್ಎಂಎಸ್) ನೇತೃತ್ವದಲ್ಲಿ ಮಂಗಳೂರು ಪುರಭವನದ ಮಿನಿ ಸಭಾಭವನದಲ್ಲಿ ರವಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಸಂಸ್ಥೆಯಾಗಿ ಕರಾವಳಿ ಭಾಗದಿಂದ ಮೂಡಿಬಂದ ಭಾರತ್ ಸಮೂಹ ಸಂಸ್ಥೆ ಅದ್ವಿತೀಯ ಸಾಧನೆ ಮಾಡಿತೋರಿಸಿದೆ. ಇದರಲ್ಲಿ ಅನಂತ್ ಜಿ. ಪೈ ಅವರ ಕೊಡುಗೆಯೂ ಅಪಾರ. ಅವರ ಯಶಸ್ವಿ ಕಾರ್ಯಚಟು ವಟಿಕೆಗಳ ಮುಖೇನ ಸಂಸ್ಥೆ ಬೆಳೆಯುವ ಜತೆಗೆ ಕಾರ್ಮಿಕರಿಗೆ ಅತ್ಯುತ್ತಮ ಅವಕಾಶಗಳು ಲಭಿಸಿವೆ ಎಂದರು.
ಬೇರೆ ಬೇರೆ ರೀತಿಯಲ್ಲಿ ಉದ್ಯೋಗ ಅಥವಾ ಇನ್ನಿತರ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಿರ ಬೇಕು ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಅನಂತ್ ಜಿ. ಪೈ ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ವಿತೀಯ ಎಂದರು.ಮನಪಾ ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ ಮಾತನಾಡಿ, ಉದ್ಯಮ ವಲಯದಲ್ಲಿ ಸಜ್ಜನ ಆಡಳಿತಗಾರನಾಗಿ ಅನಂತ್ ಜಿ. ಪೈ ಅವರು ಮಾಡಿದ ಸಾಧನೆ ಅನನ್ಯ ಎಂದರು.
‘ಉದಯವಾಣಿ’ಯ ಸಹಾಯಕ ಸಂಪಾದಕ ಮನೋಹರ ಪ್ರಸಾದ್ ಮಾತನಾಡಿ, ಬೀಡಿ ಕಾರ್ಮಿಕರ ಹಿತಾಸಕ್ತಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸುವ ಮೂಲಕ ಅನಂತ್ ಜಿ. ಪೈ ಅವರು ಮಾದರಿಯಾಗಿದ್ದರು. ಭಾರತ್ ಗ್ರೂಪ್ ಆಫ್ ಕಂಪೆನಿಯ ಅಭಿವೃದ್ಧಿಗೆ ಹೊಸ ಸ್ವರೂಪ ನೀಡಿದ್ದಾರೆ ಎಂದರು.
ಬೀಡಿ ಕಂಟ್ರಾಕ್ಟರ್ ಯೂನಿಯನ್ (ಎಚ್ಎಂಎಸ್) ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಮಹಮ್ಮದ್ ರಫಿ ಸ್ವಾಗತಿಸಿದರು. ಅಧ್ಯಕ್ಷ ಹರೀಶ್ ಕೆ.ಎಸ್. ಉಪಸ್ಥಿತರಿದ್ದರು.