Advertisement
ಮಹಾವಿಷ್ಣು ಅನಂತ ಚತುರ್ದಶಿಯ ದಿನದಂದು ಅನಂತ ಶೇಷನಲ್ಲಿ ಪವಡಿಸಿ ಪದ್ಮನಾಭ ರೂಪಿಯಾಗಿ ಕಾಣಿಸಿಕೊಳ್ಳುತ್ತಾನೆ. ಲೌಕಿಕ ಕಾಮನೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ಈ ವ್ರತವನ್ನು ಆಚರಿಸುತ್ತಾರೆ. ಇದು ಕಾಮ್ಯವ್ರತ. ಕಳೆದುಹೋದ ಸಂಪತ್ತನ್ನು ಮರಳಿಗಳಿಸುವುದು ಈ ವ್ರತದ ವೈಶಿಷ್ಟé. ಈ ದಿನದಂದು ಬ್ರಹ್ಮಾಂಡದಲ್ಲಿ ವಿಷ್ಣುವಿನ ವಿಶೇಷ ಕಂಪನವು ಭೂಮಿಯ ಮೇಲೆ ಫಲಿಸುವುದರಿಂದ ಸಾಮಾನ್ಯ ಜನರಿಗೂ ಅದನ್ನು ಸಂಪಾದಿಸುವ ಸುಯೋಗ.
Related Articles
Advertisement
ಸಹಸ್ರನಾಮ್ನೇ ಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ
ಅನಂತನಿಗೆ ನಮನಗಳು. ಅಸಂಖ್ಯ ರೂಪಗಳನ್ನು ಧರಿಸಿದವನಿಗೆ, ಅಸಂಖ್ಯ ಪಾದಗಳು, ಕರಗಳು, ಕಣ್ಣುಗಳು, ಶಿರಗಳನ್ನು ಹೊಂದಿದವನಿಗೆ, ಅಸಂಖ್ಯ ನಾಮಗಳನ್ನು ಹೊಂದಿ ದವನಿಗೆ, ಶಾಶ್ವತ ಪುರುಷನಿಗೆ, ಸಾವಿರ ಕೋಟಿ ಯುಗಗಳನ್ನು ಹೊಂದಿದವನಿಗೆ ನಮಸ್ಕಾರಗಳು. ಇವನೇ ಅನಂತ. ಅನಂತ ಶ್ರೀಕೃಷ್ಣನ ವಿಭೂತಿ ರೂಪ. (ವಿಭೂತಿ ಯೋಗ ಭ.ಗೀ) ನಾಗರನಲ್ಲಿ ನಾನು ಅನಂತ ಎನ್ನುತ್ತಾನೆ ಶ್ರೀಕೃಷ್ಣ.
ಅನಂತಾಯ ಸಮಸ್ತುಭ್ಯಂ ಸಹಸ್ರ ಶಿರಸೇ ನಮಃ
ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ
ಶೇಷ (ಆದಿಶೇಷ) ನಾಗನ ಹೆಸರು ಅನಂತ. ಸಾವಿರ ತಲೆಯುಳ್ಳವನು. ಇದರಲ್ಲಿ ಪವಡಿಸಿದವನೇ ಅನಂತ ಪದ್ಮನಾಭ.
ಅನಂತ ದಾರ -ಸೂತ್ರ :
ಅನಂತ ಚತುರ್ದಶಿಯಂದು ಶ್ರೀಮನ್ನಾರಾಯಣನನ್ನು ಪೂಜಿಸಿದ ಬಳಿಕ 14 ಗಂಟುಗಳುಳ್ಳ ಅನಂತ ಸೂತ್ರವನ್ನು ಬಲಕೈಗೆ ಧರಿಸಬೇಕು. ಅನಂತಪದ್ಮನಾಭನ ಪ್ರಸಾದ ಎಂದು ಅದರ ಪೂಜ್ಯತೆ. ರಾತ್ರಿಯಲ್ಲಿ ಅದನ್ನು ಕಳಚಿಟ್ಟು ಮರುದಿನ ಪವಿತ್ರ ನದಿಯಲ್ಲೋ ಕೆರೆಯಲ್ಲೋ ವಿಸರ್ಜಿಸಬೇಕು. ಮರುದಿನವೂ ಅಸಾಧ್ಯವಾದರೆ ಮುಂದಿನ 14 ದಿವಸಗಳವರೆಗೆ ಅದನ್ನು ಕೈಯಲ್ಲಿ ಧರಿಸಿರಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಮುಂದಿನ ಅನಂತ ಚತುರ್ದಶಿಯವರೆಗೂ ಧರಿಸಬೇಕು. 14 ಗಂಟುಗಳು ದಾರ ವಿಷ್ಣುವಿನ 14 ಅವತಾರಗಳನ್ನು ಸೂಚಿಸುತ್ತದೆ. ಅನಂತಸೂತ್ರ ಧರಿಸಿದಾತನನ್ನು ಶ್ರೀಮಹಾವಿಷ್ಣು ರಕ್ಷಿಸುತ್ತಾನೆ ಮತ್ತು ಎಲ್ಲ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ನಂಬಿಕೆ.
ಚತುರ್ದಶಿ ಅಂದರೆ 14 – ಗುಟ್ಟೇನು?:
ಚತುರ್ದಶಿ ಅಂದರೂ 14. ಚತುರ್ದಶೀ ದಿನದಂದೇ ಬರುವುದು ಅನಂತ ಚತುರ್ದಶಿ ಅಥವಾ ವ್ರತ. ಈ ವ್ರತದಲ್ಲಿ ಹದಿನಾಲ್ಕು ಸಂಖ್ಯೆಗೆ ವಿಶೇಷ ಮಹತ್ವನ್ನೇಕೆ ನೀಡಿದ್ದಾರೆ?
ಅನಂತ ಚತುರ್ದಶಿ 14 ನೇ ದಿನದ ಆಚರಣೆ. ಈ ವ್ರತದ ಅವಧಿ 14 ವರ್ಷ. ಉದ್ಯಾಪನೆಯೊಂದಿಗೆ ವ್ರತ ಪರಿಸಮಾಪ್ತಿಗೊಳ್ಳುತ್ತದೆ. 14 ವಿಧದ ಹೂವು, ಹಣ್ಣು ಮತ್ತು ಖಾದ್ಯಗಳನ್ನರ್ಪಿಸಿ ವಿಷ್ಣುವಿನ ಆರಾಧನೆ. 14 ಗ್ರಂಥಿಗಳುಳ್ಳ ದಾರವನ್ನು(ಥೊರಾ) ವಿಷ್ಣುವಿಗೆ ಅರ್ಪಿಸಲಾಗುತ್ತದೆ. 14 ಗಂಟುಗಳ ದಾರ ವಿಷ್ಣುವಿನ 14 ಅವತಾರ ಸೂಚಕ. ಗೋಧಿಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ 28 ಬಗೆಯ ಸಿಹಿ ಖಾದ್ಯದಲ್ಲಿ ಅರ್ಧದಷ್ಟು ಅನಂತಪದ್ಮನಾಭನಿಗೆ ನಿವೇದಿಸಿ ಉಳಿದರ್ಧವನ್ನು ಬ್ರಾಹ್ಮಣರಿಗೆ ಭೋಜನದಲ್ಲಿ ನೀಡಲಾಗುತ್ತದೆ. ಬ್ರಹ್ಮಾಂಡದಲ್ಲಿ 14 ಲೋಕಗಳಿವೆ. ಚತುರ್ದಶ ಭುವನ. ಭೂಮಿಯೂ ಸೇರಿದಂತೆ ಮೇಲೆ 7 (ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ) ಮತ್ತು ಭೂಮಿ ಕೆಳಗೆ 7 ಲೋಕಗಳು.(ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳ)ಸಂಬ ಬ್ರಹ್ಮಾಂಡದ ಪರಮ ಶ್ರೇಷ್ಠ ದೇವರು ಮಹಾವಿಷ್ಣು, ಅನಂತ. ಕಾಲಗಣನೆಯ ಮಾಪನದಲ್ಲಿ ಒಂದು ಕಲ್ಪದಲ್ಲಿ 14 ಮನ್ವಂತರಗಳಿವೆ. ಎಲ್ಲ ಮನ್ವಂತರಗಳ ದೇವತೆ, ಕಾಲಪುರುಷ ಮಹಾವಿಷ್ಣು, ಅನಂತ. ಅನಂತ ಚತುರ್ದಶಿಯಂದು ಗೋದಾನಕ್ಕೆ ವಿಶೇಷ ಫಲವಿದೆ.
ಚಕ್ರಾಧಿಪತಿ ಶ್ರೀಮನ್ನಾರಾಯಣನೇ:
ನಮ್ಮ ಶರೀರದಲ್ಲಿರುವ ಏಳು ಚಕ್ರಗಳಿಗೂ (ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಅಜ್ಞಾ, ಸಹಸ್ರಾರ) ಅನಂತವ್ರತಕ್ಕೂ ಸಂಬಂಧವಿದೆ ಎನ್ನುತ್ತಾರೆ ಸಾಧಕರು. ದೇಹದಲ್ಲಿನ 7 ಚಕ್ರಗಳಿಗೂ, ಚತುರ್ದಶ ಭುವನದ 14 ಲೋಕಕ್ಕೂ ಅಧಿಪತಿ ಶ್ರೀಮನ್ನಾರಾಯಣನೇ. ಅವನೇ ಅನಂತ ಪದ್ಮನಾಭ.
-ಜಲಂಚಾರು ರಘುಪತಿ ತಂತ್ರಿ, ಉಡುಪಿ