ಆನಂದಪುರ: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ತರವಾದ ಯೋಜನೆಯಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ಈ ಭಾಗದಲ್ಲಿ ಆರಂಭವಾಗಿದ್ದು ಮಕ್ಕಳಿಗೆ ಅನುಕೂಲಕರವಾಗಿದೆ.
ಕಳೆದ ಸಾಲಿನಲ್ಲೇ ಈ ಆದೇಶ ಸರ್ಕಾರದಿಂದ ಜಾರಿಯಾಗಿದ್ದರೂ ಮೂಲ ಸೌಕರ್ಯ ಕೊರತೆಯ ಕಾರಣದಿಂದ ಅನುಷ್ಠಾನವಾಗಿರಲಿಲ್ಲ. ಆದರೆ ಈ ವರ್ಷದಿಂದ ಪ್ರಾರಂಭವಾಗುತಿದೆ. ರಾಷ್ಟ್ರೀಯ ಹೆದ್ದಾರಿ 206ರ ಸಾಗರ ರಸ್ತೆಯ ಪಪೂ ಕಾಲೇಜು ಈಗ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿತವಾಗಿದ್ದು ಬಣ್ಣ- ಬಣ್ಣಗಳಿಂದ ಕಂಗೊಳಿಸುತ್ತಿದೆ. ಈ ಶಾಲೆ ಪ್ರಾರಂಭವಾಗುವುದರಿಂದ ಗ್ರಾಮೀಣ ಪ್ರದೇಶಗಳಾದ ಆನಂದಪುರ ,ಆಚಾಪುರ, ಯಡೇಹಳ್ಳಿ, ಹೊಸೂರು, ಗೌತಮಪುರ ಭಾಗದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ. ಈ ಭಾಗದಲ್ಲಿ 1 ರಿಂದ 12ನೇ ತರಗತಿಯವರೆಗೆ ಸರ್ಕಾರದ ಆಂಗ್ಲ ಮಾಧ್ಯಮ ಶಾಲೆಯ ಕೊರತೆ ಇತ್ತು. ಆದರೆ ಈ ಕೊರತೆ ಈಗ ನೀಗಿದೆ.
ಈ ವರ್ಷದಿಂದ ಎಲ್ಕೆಜಿ ಮತ್ತು ಯುಕೆಜಿ ಮತ್ತು ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ 2 ವಿಭಾಗದಲ್ಲಿ ತರಗತಿಗಳು ಪ್ರಾರಂಭವಾಗಿವೆ. ಸರ್ಕಾರ ಒಂದೇ ಸೂರಿನ ಅಡಿಯಲ್ಲಿ ಎಂಬ ಶಿಕ್ಷಣ ಯೋಜನೆಯಲ್ಲಿ ಮಕ್ಕಳು ಕಲಿಕೆ ಮಾಡಬೇಕು. ಈ ಕಲಿಕೆಯಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ವ್ಯವಸ್ಥೆ ಮಾಡುವುದರ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂಬುದನ್ನರಿತು ಆರಂಭಿಸಿದೆ.
ಗುಣಾತ್ಮಕ ಶಿಕ್ಷಣದೊಂದಿಗೆ ಕ್ರೀಡೆ, ಕಂಪ್ಯೂಟರ್ ಶಿಕ್ಷಣ, ಸ್ಮಾಟ್ ಕ್ಲಾಸ್, ಉತ್ತಮ ಗ್ರಂಥಾಲಯ, ವಿಜ್ಞಾನ ವಿಭಾಗದ ಮಕ್ಕಳಿಗೆ ಪ್ರಯೋಗಾಲಯ, ಸುಂದರವಾದ ಪಾರ್ಕ್ ಜೊತೆಗೆ ಸಾಂಸ್ಕೃತಿಕ ಕಲಿಕೆಗೂ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗೆ ಸರ್ಕಾರದಿಂದ ಉಚಿತ ಪಠ್ಯ ಪುಸ್ತಕ, ಬಟ್ಟೆ, ಸೈಕಲ್ ಶೋ, ಹಾಲು, ಬಿಸಿಯೂಟ ಎಲ್ಲದರೊಂದಿಗೆ ಉತ್ತಮ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣವನ್ನು ನೀಡಲಿದೆ. ಸುಮಾರು 900 ರಿಂದ 1000 ವಿದ್ಯಾರ್ಥಿಗಳು ಒಂದೇ ಸೂರಿನಡಿಯಲ್ಲಿ ಕಲಿಕೆ ಮಾಡುತ್ತಾರೆ. ಅಲ್ಲದೆ ಮುಂದಿನ ದಿನದಲ್ಲಿ ಆನಂದಪುರ ಪ್ರಾರ್ಥಮಿಕ ಶಾಲೆಗಳು ಇದರೊಂದಿಗೆ ಸೇರಿಕೊಳ್ಳುತ್ತವೆ. ಇದರಿಂದ ಸಾವಿರಾರು ಮಕ್ಕಳು ಒಂದೇ ಕಡೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿ ಅಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಕಾಲೇಜು ವಿದ್ಯಾರ್ಥಿಗಳಿಗು ಬಿಸಿಯೂಟ ಸಿಗುತ್ತದೆ.
ಈ ವರ್ಷದಲ್ಲಿ ಸರ್ಕಾರದಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ನೂತನ ಹಾಗೂ ಸುಂದರವಾದ ಶಾಲಾ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದ್ದು ಮುಂದಿನ ವರ್ಷದಲ್ಲಿ ಈ ಸುಂದರವಾದ ಕಟ್ಟಡ ಕರ್ನಾಟಕ ಪಬ್ಲೀಕ್ ಸ್ಕೂಲ್ ವರ್ಣರಂಜಿತವಾಗಿ ಕಾಣಲಿದೆ.