ಆನಂದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಶುಕ್ರವಾರ ರಾತ್ರಿ ಜನಸಾಗರವೇ ಹರಿದು ಬಂದಿತ್ತು. ಸರದಿ ಸಾಲಿನಲ್ಲಿ ಭಕ್ತರು ದೇವಿಯ ದರ್ಶನ ಪಡೆದರು.
ಶುಕ್ರವಾರ ಆದ ಕಾರಣ ಬಹುತೇಕ ಮಹಿಳೆಯರು ಆಗಮಿಸಿ ದೇವಿಗೆ ಮಡಲಕ್ಕಿ ನೀಡುವುದರ ಮೂಲಕ ಹರಕೆ ತೀರಿಸಿದರು. ಪ್ರತಿದಿನ ಭಕ್ತರು ದೇವಿಗೆ ನೀಡಿದ ಸೀರೆಯನ್ನು ಸಂಜೆ 4 ಗಂಟೆಯಿಂದ ಹರಾಜು ಮಾಡಲಾಗುತ್ತಿದೆ. ನಂತರ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀರಾಮ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ನಂತರ ರಿಪ್ಪನ್‌ಪೇಟೆಯ ಪ್ರಸನ್ನಕುಮಾರ್ ಕಲ್ಮಕ್ಕಿ ಅವರಿಂದ ಜಾದೂ ಪ್ರದರ್ಶನ ನಡೆಯಿತು. ನಂತರ ಸಾಗರದ ಕಲಾರಾಧನಾ ಆರ್ಟ್ ಫೌಂಡೇಷನ್ ಅವರಿಂದ ನಡೆದ ನೃತ್ಯ ಸಂಭ್ರಮದಲ್ಲಿ ಶ್ರೀ ದುರ್ಗಾ ವೈಭವ ನೃತ್ಯ ರೂಪಕ ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಯಿತು. ರಾತ್ರಿ 10.30ರಿಂದ ಕೆ.ಕೆ. ಮೂವೀ ಮೇಕರ್ ಮತ್ತು ಕೆ.ಕೆ. ಇವೆಂಟ್ಸ್ ಕುಂದಾಪುರ ಮತ್ತು ಬೆಂಗಳೂರು ಕೆ.ಕೆ., ರಾಘು ರಟ್ಟಾಡಿ ಅವರ ಸಂಯೋಜನೆಯಲ್ಲಿ ಗಣೇಶ್ ಸಾಲಿಗ್ರಾಮ ಇವರ ಸಾರಥ್ಯದ ಕಲಾದರ್ಶಿನಿ ಕಲಾವಿದರಿಂದ “ಬಧ್ಕುಕ್ ಬಿಡಿ’ ಎಂಬ ಹಾಸ್ಯ ನಾಟಕ ನಡೆಯಿತು. ಆನಂದಪುರ ಯಡೇಹಳ್ಳಿ ಮಲ್ಲೇಶ್ ಎನ್. ಅವರ ನಿದೇಶನದಲ್ಲಿ ತಯಾರಾದ “ಮಹಾಬಲಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು.