ಆನಂದಪುರ: ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳು ಸ್ಥಳೀಯವಾಗಿ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತವೆ. ಎಲ್ಲಿ ಶ್ರದ್ಧೆ, ನಂಬಿಕೆ, ಭಕ್ತಿ ಹಾಗೂ ಸಮರ್ಪಣಾ ಮನೋಭಾವ ಇರುತ್ತದೆಯೋ ಅಂತಹ ಕಡೆಗಳಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶಾರದಾಪೀಠದ ಡಾ| ವಿ.ಆರ್. ಗೌರಿಶಂಕರ್ ತಿಳಿಸಿದರು.
ಸಮೀಪದ ಹೊಸಗುಂದದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಹೊಸಗುಂದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಈ ಭಾಗದ ಜನರು ಉತ್ಸವದ ಯಶಸ್ಸಿಗೆ ತಮ್ಮ ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡಿದ್ದರು. ಇದರಿಂದ ಮೂರು ದಿನಗಳ ಹೊಸಗುಂದ ಉತ್ಸವ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಹೇಳಿದರು.
ಹಂಪಿ ಉತ್ಸವದಂತೆ ಹೊಸಗುಂದ ಉತ್ಸವ ಸಹ ನಡೆಯಬೇಕು ಎನ್ನುವುದು ನಮ್ಮ ಮನದಿಂಗಿತವಾಗಿದೆ. ಇದಕ್ಕೆ ಶ್ರೀ ಪೀಠದ ಎಲ್ಲ ರೀತಿಯ ಸಲಹೆ ಇರುತ್ತದೆ. ಇದೊಂದು ಮಲೆನಾಡಿನ ಪ್ರತಿಷ್ಠಿತ ಉತ್ಸವವಾಗುವ ಜೊತೆಗೆ ಮುಂದಿನ ಪೀಳಿಗೆ ಇದನ್ನು ಮುಂದುವರಿಸಿಕೊಂಡು ಹೋಗುವ ವಾತಾವರಣ ಕಲ್ಪಿಸುವ ಅಗತ್ಯವಿದೆ. ಲಕ್ಷ ದೀಪೋತ್ಸವದಂತಹ ನಮ್ಮ ಪ್ರಾಚೀನ ಸಂಸ್ಕೃತಿಯ ಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಿರುವುದು ಸ್ಮರಣೀಯ ಕಾರ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇವಾ ಟ್ರಸ್ಟ್‌ನ ಮುಖ್ಯಸ್ಥ ಸಿ.ಎಂ.ಎನ್. ಶಾಸ್ತ್ರಿ, ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಉತ್ಸವದಲ್ಲಿ ಪಾಲ್ಗೊಂಡಿರುವುದು ದಾಖಲೆಯಾಗಿದೆ. ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ, ಡಾ| ವಿ.ಆರ್. ಗೌರಿಶಂಕರ್ ಅವರು ಸ್ಥಳದಲ್ಲಿಯೇ ಮೂರು ದಿನ ಮೊಕ್ಕಾಂ ಮಾಡಿ ಸಲಹೆ ನೀಡಿರುವುದು ಅರ್ಥಪೂರ್ಣವಾಗಿ ಉತ್ಸವ ಜರುಗಲು ಕಾರಣವಾಗಿದೆ. ಅನೇಕ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಇನ್ನಷ್ಟು ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದು ಹಾಗೂ ಈ ಉತ್ಸವವನ್ನು ಮಲೆನಾಡಿನ ಮನೆಮಾತಾಗಿಸುವ ನಿಟ್ಟಿನಲ್ಲಿ 7ದಿನಗಳ ಹೊಸಗುಂದ ಉತ್ಸವ ಮುಂದಿನ ವರ್ಷ ಆಯೋಜಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ನವದೆಹಲಿ ಭಾರತೀಪೀಠಂನ ಶ್ರೀ ಸರ್ವಾನಂದ ಸರಸ್ವತಿ ಸ್ವಾಮೀಜಿ, ನ್ಯಾಯವಾದಿ ಸುಬ್ರಹ್ಮಣ್ಯ ಜೋಯ್ಸ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಶೋಭಾ ಶಾಸ್ತ್ರಿ ಇದ್ದರು. ಜ್ಯೋತಿ ಕೋವಿ ಸ್ವಾಗತಿಸಿದರು. ಗಿರೀಶ್ ಕೋವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಮಂಕಳಲೆ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.
ನಂತರ ಮೃದಂಗ ಮಾಂತ್ರಿಕ ಆನೂರು ಅನಂತ ಕೃಷ್ಣ ಶರ್ಮ ಮತ್ತು ಸಂಗಡಿಗರಿಂದ ಮೃದಂಗ ವಾದನ, ಶ್ರೀಧರ ಸಾಗರ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಿತು.