ಆನಂದಪುರ: ಭಾರತೀಯ ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅನಾದಿ ಕಾಲದಿಂದ ಒಂದು ವಿಶಿಷ್ಟ ಸಂಪ್ರದಾಯವನ್ನು ಪರಿಪಾಲನೆ ಮಾಡುವಂತಹ ಪರಂಪರೆ ನಮ್ಮದು ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನುಡಿದರು.
ಸಮೀಪದ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಲ್ಲಿನ ಹೊಸಗುಂದ ದೇಗುಲ 9ನೇ ಶತಮಾನದ ಅಪರೂಪವಾದ ದೇವಾಲಯವಾಗಿದೆ. ಇಂತಹ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವಾಗುತ್ತಿರುವುದರಿಂದ ಹಿಂದಿನ ಕೆಳದಿ ಅರಸರ ಆಡಳಿತದಲ್ಲಿ ಇದ್ದಂತಹ ವೈಭವ ಮತ್ತೆ ಕಾಣಲು ಸಾಧ್ಯವಾಗಿದೆ ಎಂದರು.
ಹಿಂದೂಸ್ಥಾನದ ವಿಶಿಷ್ಟ ಪರಂಪರೆಯ ಮೂಲಕ ನಾವು ಪ್ರಪಂಚದ ಎಲ್ಲಾ ದೇಶಗಳಿಗೆ ಉತ್ತಮ ಸಲಹೆಯನ್ನು ನೀಡಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಭಕ್ತನು ಪುಣ್ಯದ ಕಾಯಕವನ್ನು ಮಾಡಬೇಕು. ಇದರಿಂದ ನಮ್ಮ ಜೀವನ ಪಾವನವಾಗುತ್ತದೆ. ಮುಂದೆ ಈ ಹೊಸಗುಂದ ನಗರಿಯಲ್ಲಿ ಕೆಳದಿ ಅರಸರ ವೈಭವ ಮರುಕಳಿಸಲಿದೆ ಎಂದರು.
ಸಿಗಂದೂರು ದೇವಾಲಯದ ಧರ್ಮದರ್ಶಿ ಹಾಗೂ ಈ ಕುಂಭ ಮಹೋತ್ಸವದ ಸಮಿತಿಯ ಅಧ್ಯಕ್ಷ ಡಾ| ರಾಮಪ್ಪ ಮಾತನಾಡಿ, ಪಾಳು ಬಿದ್ದ ದೇವಾಲಯಗಳನ್ನು ಒಟ್ಟಾಗಿ ಜೀರ್ಣೋದ್ಧಾರ ಮಾಡಿ ಲೋಕಾರ್ಪಣೆ ಮಾಡುತ್ತಿರುವುದು ಐತಿಹಾಸಿಕ ದಾಖಲೆ ಎಂದರು.
ಸಿ.ಎಂ. ನಾರಾಯಣ ಶಾಸ್ತ್ರಿ, ದೇಹಲಿಯ ಸರ್ವಾನಂದ ಸರಸ್ವತಿಯವರು, ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್, ದೆಹಲಿಯ ರಾಜೇಶ್ ಅಗರವಾಲ್ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಶೃಂಗೇರಿ ಶ್ರೀಗಳನ್ನು ಸ್ಥಳೀಯ ಸಂಘದ ಮಹಿಳೆಯರು ಸಾವಿರಾರು ಕುಂಭದೊಂದಿಗೆ ಭಾರೀ ವೆರವಣಿಗೆಯ ಮೂಲಕ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸ್ವಾಗತಿಸಿದರು.