Advertisement

ಕೆಳದಿ ಅರಸರನ್ನು ಗೌರವಿಸಿ: ಆಯನೂರು

05:10 PM Nov 28, 2019 | Naveen |

ಆನಂದಪುರ: ಎಲ್ಲಿ ಮಠ, ಮಠಾ ಧೀಶರು ಇರುತ್ತಾರೋ ಅಲ್ಲೆಲ್ಲಾ ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನಗಳು ನಡೆಯುತ್ತವೆ. ಎಲ್ಲ ಜಾತಿ- ಧರ್ಮ, ಜನಾಂಗವನ್ನು ನಾವು ಒಪ್ಪಿಕೊಂಡಿದ್ದೇವೆ, ಅಪ್ಪಿಕೊಂಡಿದ್ದೇವೆ. ಆದರೆ ಕೆಲವರು ನಮ್ಮನ್ನು ಒಪ್ಪಿಕೊಂಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ತಿಳಿಸಿದರು.

Advertisement

ಸಮೀಪದ ಮುರುಘಾಮಠದಲ್ಲಿ ಮಂಗಳವಾರ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ವತಿಯಿಂದ ಕಂಚಿನ ರಥ ದೀಪೋತ್ಸವದ ಅಂಗವಾಗಿ ಏರ್ಪಡಿಸಿದ್ದ ಭಾವೈಕ್ಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಭಾವೈಕ್ಯ ಸಮ್ಮೇಳನಗಳಲ್ಲಿ ಅಲ್ಪಸಂಖ್ಯಾತರ ಜೊತೆ ಹೋಲಿಕೆ ಮಾಡಿ ಮಾತನಾಡಿದರೆ ಮಾತ್ರ ನಾವು ವಿಚಾರವಾದಿಗಳು ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದಾರೆ ಎಂದರು.

ನಾವು ಇತಿಹಾಸವನ್ನು ಮರೆತಿದ್ದೇವೆ. ಮೈಸೂರು, ವಿಜಯನಗರ ರಾಜವಂಶಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಕೆಳದಿ ಅರಸರು ಎನ್ನುವುದನ್ನು ಯಾವತ್ತೂ ಮರೆಯಬಾರದು. ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಮಹಿಳೆಯೊಬ್ಬಳು ರಾಜ್ಯಾಡಳಿತ ಮಾಡಿದ ದಾಖಲೆ ಇದ್ದರೆ ಅದು ಕೆಳದಿ ರಾಣಿ ಚೆನ್ನಮ್ಮಾಜಿ ಮಾತ್ರ. ಆದರೆ ನಾವು ಮಲೆನಾಡಿನವರು ಸಭೆ ಸಮಾರಂಭಗಳಲ್ಲಿ ಮೈಸೂರು ಪೇಟವನ್ನು ತೊಡಿಸಿ ಸಂಭ್ರಮಿಸುತ್ತೇವೆ. ನಿಜವಾಗಿಯೂ ನಾವು ನಮ್ಮ ಕೆಳದಿ ಅರಸರಿಗೆ ಗೌರವ ಕೊಡುವುದಾದರೆ ಮೈಸೂರು ಪೇಟದ ಬದಲು ಕೆಳದಿ ದೊರೆ ಶಿವಪ್ಪ ನಾಯಕ ತೊಡುತ್ತಿದ್ದ ಪೇಟವನ್ನು ಸನ್ಮಾನಕ್ಕೆ ಮುಂದಿನ ದಿನಗಳಲ್ಲಿ ಬಳಸುವಂತೆ ಆಗಬೇಕು. ಶಿವಮೊಗ್ಗ ಜಿಲ್ಲೆ ಇದಕ್ಕೆ ಮುನ್ನುಡಿ ಬರೆಯುವ ಮೂಲಕ ಕೆಳದಿ ಅರಸರನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಿಕ್ಷಣ ವಿಫಲ: ಶಾಸಕ ಹಾಗೂ ಅಡಕೆ ಟಾಸ್ಕ್ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಶಿಕ್ಷಣ ಪದ್ಧತಿ ಬುದ್ಧಿವಂತರನ್ನು, ವಿದ್ಯಾವಂತರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆಯೇ ವಿನಃ, ಹೃದಯವಂತರನ್ನು, ಸಂಸ್ಕಾರವಂತರನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಪರಿಸ್ಥಿತಿ ಬದಲಾಗುತ್ತಿರುವುದು ದುರಂತದ ಸಂಗತಿ. ಮಠ- ಮಂದಿರಗಳು ಮಾನವೀಯ ಮೌಲ್ಯವನ್ನು ಜನಮಾನಸದಲ್ಲಿ ಬಿತ್ತುವ ಕೆಲಸ ಮಾಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಮಠಾಧೀಶರು, ಮಠಗಳ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.

ಧರ್ಮಸತ್ತ, ರಾಜ್ಯಸತ್ತ: ನಾವು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಧರ್ಮ ಮತ್ತು ರಾಜ್ಯ ಎಲ್ಲವೂ ಸಂವಿಧಾನದ ಅಡಿಯಲ್ಲಿಯೇ ಬರುತ್ತದೆ. ಈ ನಿಟ್ಟಿನಲ್ಲಿ ನಾವು ಧರ್ಮಸತ್ತ ಮತ್ತು ರಾಜ್ಯಸತ್ತವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಮಠಾಧೀಶರ ಮಾರ್ಗದರ್ಶನ ಅಗತ್ಯ. ಮುರುಘಾಮಠದ ಏಳಿಗೆಗೆ ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ನೀಡುವುದಾಗಿ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಕವಲೇದುರ್ಗ ಮಹಾಮಹತ್ತಿನ ಮಠದ ರಾಜಗುರು ಡಾ| ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀಮಠದಿಂದ “ಕೆಳದಿ ರಾಣಿ ಚೆನ್ನಮ್ಮಾಜಿ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಲ್‌.ಟಿ.ತಿಮ್ಮಪ್ಪ ಹೆಗಡೆ, ಡಾ| ಪಾರ್ವತಿ ರಾಜಶೇಖರ್‌, ಚಂದ್ರಶೇಖರ ಗೌಡ, ಚಂದ್ರಶೇಖರ ಎನ್‌. ಶಿರವಂತೆ, ಬಿ.ಎ.ಇಂದೂಧರ ಬೇಸೂರು, ಜಿ.ಸಿ. ಸಿದ್ದಪ್ಪ, ಎನ್‌.ಎಸ್‌. ನಾರಾಯಣಮೂರ್ತಿ, ಕಿಶೋರ್‌, ಅಕ್ಷಯ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಕತ್ತಿಗೆ ಚನ್ನಪ್ಪ, ಬೂದ್ಯಪ್ಪ ಹೊಸಕೊಪ್ಪ, ಗೋವಿಂದನ್‌ ನಾಯರ್‌, ಎನ್‌.ಜೆ. ರಾಜಶೇಖರ್‌, ಮಂಜುಳಾ ಸಿದ್ದಪ್ಪ, ಎಂ. ಗದಿಗಯ್ಯ, ಎಂ.ಎಸ್‌. ಚಂದ್ರಶೇಖರ್‌, ಯೋಗೀಶ್‌ ನಿರ್ನಿಕಲ್ಪ, ಎ. ಬಸವರಾಜ್‌ ಅವರಿಗೆ ಗುರುರಕ್ಷೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ಹೃದ್ರೋಗ ವಿಭಾಗದ ಪ್ರಾಧ್ಯಾಪಕಿ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು “ಮಲೆನಾಡಿನ ಶಿವಶರಣೆಯರು’ ವಿಷಯ ಕುರಿತು ಉಪನ್ಯಾಸ ನೀಡಿದರು.

ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಎಡೆಯೂರು ತೋಂಟದಾರ್ಯಮಠದ ಡಾ| ತೋಂಟದ ಸಿದ್ದರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ ಹುಣಾಲಮಡಿಕೆ, ಅಕ್ಷಯ ಸೊಸೈಟಿ ಅಧ್ಯಕ್ಷ ದಿನೇಶ್‌ ಬರದವಳ್ಳಿ, ಹೊಸಗುಂದ ಉಮಾಮಹೇಶ್ವರ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಸಿ.ಎಂ.ಎನ್‌. ಶಾಸ್ತ್ರಿ, ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್‌ ಹಾಗೂ ವಿವಿಧ ಮಠಾಧಿಧೀಶರು ಇದ್ದರು. ನಂತರ ಕಂಚಿನ ರಥ ದೀಪೋತ್ಸವ ಹಾಗೂ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಶಿವಮೊಗ್ಗದ ಆಕಾಶವಾಣಿ ಕಲಾವಿದೆ ನಾಗರತ್ನಮ್ಮ ಚಂದ್ರಶೇಖರಯ್ಯ, ಬೆಂಗಳೂರಿನ ಜಿ. ಈಶ್ವರಿ ಪ್ರಸಾದ್‌ ಅವರಿಂದ ವಚನ ಸಂಗೀತ, ನಾಗಶ್ರೀ ಚೈತನ್ಯ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next