ಆನಂದಪುರ: ಸೈಕಲ್ ತುಳಿಯುವುದರಿಂದ ಉತ್ತಮ ದೈಹಿಕ ಆರೋಗ್ಯ ಲಭಿಸುತ್ತದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಸೈಕಲ್ ಬಳಕೆ ಕಾಣ ಸಿಗುವುದು ಬಹಳ ವಿರಳವಾಗಿದೆ. ಹಿಂದಿನ ಜನರು ಹೆಚ್ಚಾಗಿ ಸೈಕಲ್ ಬಳಸುತ್ತಿದ್ದರಿಂದ ಅವರ ಆರೋಗ್ಯವೂ ಉತ್ತಮವಾಗಿರುತ್ತಿತ್ತು ಇಂದು ಬೈಕ್, ಕಾರ್ ಮುಂತಾದುವುಗಳ ಬಳಕೆ ಗ್ರಾಮೀಣ ಪ್ರದೇಶಗಳಲ್ಲೂ ಅಧಿಕವಾದ್ದರಿಂದ ಸೈಕಲ್ ಸವಾರರು ಕಡಿಮೆಯಾಗಿದ್ದಾರೆ ಎಂದು ಕನ್ನಡ ಸಂಘದ ಮಾಜಿ ಅಧ್ಯಕ್ಷ ಕೆ.ಟಿ. ತಿಮ್ಮೇಶ್ ಹೇಳಿದರು.
ಪಟ್ಟಣದ ಕನ್ನಡ ಸಂಘದಿಂದ ಆಯೋಜಿಸಿದ್ದ ಗ್ರಾಮಾಂತರ ಮಟ್ಟದ ಪುರುಷರ ಸೈಕಲ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈಕಲ್ ತುಳಿಯುವುದರಿಂದ ದೈಹಿಕ ವ್ಯಾಯಾಮವಾಗುವುದಲ್ಲದೆ ಅನೇಕ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತವೆ. ಸೈಕಲ್ ಬಳಕೆಯಿಂದ ಪರಿಸರದ ಮೇಲೆ ಯಾವುದೇ ರೀತಿಯ ಮಾಲಿನ್ಯಕಾರಕ ಅಂಶಗಳು ಉಂಟಾಗುವುದಿಲ್ಲ. ಯಾಂತ್ರಿಕ ಜೀವನದ ಹೊರೆ ಕಡಿಮೆ ಮಾಡಿಕೊಳ್ಳುವುದು ಮುಖ್ಯ ಎಂದರು.
ಕನ್ನಡ ಸಂಘದ ಅಧ್ಯಕ್ಷ ರಾಜೇಂದ್ರ ಗೌಡ, ಕಾರ್ಯದರ್ಶಿ ಜಗನ್ನಾಥ್, ನಾಗರಾಜ್, ಲಕ್ಷ್ಮೀಶ, ಮಾಫೀರ್, ಗೌರವ ಅಧ್ಯಕ್ಷ ಚಂದ್ರಕುಮಾರ್, ಗ್ರಾಪಂ ಅಧ್ಯಕ್ಷೆ ಗಾಯತ್ರಿ ಸುಧಾಕರ್ ಮತ್ತಿತರರು ಇದ್ದರು.
20 ಕಿಮೀನಷ್ಟು ದೂರದವರೆಗೆ ನಡೆದ ಸೈಕಲ್ ಸ್ಪರ್ಧೆಯಲ್ಲಿ 16 ಸ್ಪರ್ಧಿಗಳು ಭಾಗವಹಿಸಿದ್ದರು . ಗಣೇಶ ಆಚಾಪುರ ಪ್ರಥಮ, ಉಮೇಶ ದ್ವಿತೀಯ, ಜಟ್ಟಾನಾಯ್ಕ ಕೆಂಚಾಳಸರ ತೃತೀಯ ಸ್ಥಾನ ಪಡೆದರು. ಪ್ರಥಮ 3,333, ದ್ವಿತೀಯ 2,222 ಹಾಗೂ ತೃತೀಯ1,111 ರೂಗಳನ್ನು ಬಹುಮಾನವಾಗಿ 14ರಂದು ನಡೆಯುವ ಸಂಘದ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.