Advertisement
ಹೆಸರು ಆನಂದನ್ ಗುಣಶೇಖರನ್. ವಯಸ್ಸು 29 ವರ್ಷ. ಮೂಲತಃ ತಮಿಳುನಾಡಿನ ತಂಜಾವೂರಿನವರು. ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.ಉದ್ಯಾನಗರಿಯ ಎಂಇಜಿಯಲ್ಲಿ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವರ್ಷ ಜಕಾರ್ತಾದಲ್ಲಿ ನಡೆಯುವ ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲಿ ಆನಂದನ್ ಭಾರತವನ್ನು ಪ್ರತಿನಿಧಿಸಲಿರುವುದು ಹೆಮ್ಮೆಯ ಸಂಗತಿ.
2008ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಲೈನ್ ಆಫ್ ಕಂಟ್ರೋಲ್‌ನಲ್ಲಿ (ಎಲ್‌ಒಸಿ) ಆನಂದನ್ ಗುಣಶೇಖರನ್ ಪಹರೆ ನಡೆಸುತ್ತಿದ್ದರು. ಇವರ ಜತೆಗೆ ಪಹರೆ ತಂಡದಲ್ಲಿ 6-7 ಸೈನಿಕರು ಇದ್ದರು. ತಂಡದೊಂದಿಗಿದ್ದವರೆಲ್ಲ ಮುಂದೆ ಸಾಗಿ ಆಗಿತ್ತು. ಆನಂದನ್ ಕೊನೆಯವರಾಗಿ ಗುಂಪಿನಲ್ಲಿ ನಡೆದುಕೊಂಡು ಬರುತ್ತಿದ್ದರು. ಇತ್ತ ಯಮ ಕೂಡ ತನ್ನ ಮುಂದೆಯೇ ಇದ್ದ ಎನ್ನುವ ಅರಿವಿಲ್ಲದೆ ಆನಂದನ್ ನಡೆಯುತ್ತಿದ್ದರು. ಇನ್ನೇನು ಒಂದು ಹೆಜ್ಜೆ ಮುಂದಿಡಬೇಕು, ಅಷ್ಟರಲ್ಲಿ ಢಂ… ಎನ್ನುವ ದೊಡ್ಡ ಶಬ್ದವೊಂದು ಕೇಳಿಸಿತು. ಎಲ್ಲಡೆ ದಟ್ಟ ಹೊಗೆ ಆವರಿಸಿತು. ಮುಂದೆ ಇದ್ದ ಸ್ನೇಹಿತರೆಲ್ಲ ಆನಂದನ್ ಹತ್ತಿರಕ್ಕೆ ಓಡಿ ಬಂದರು. ಅಷ್ಟರಲ್ಲಿ ನಡೆಯಬಾರದ ದುರಂತವೊಂದು ಸಂಭವಿಸಿತ್ತು. ಆನಂದನ್ ಎಡಗಾಲು ನೆಲಬಾಂಬ್ ಸ್ಫೋಟಕ್ಕೆ ಸಿಕ್ಕಿ ಛಿದ್ರವಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ದಿನ ಕಳೆದು ಆನಂದನ್‌ಗೆ ಪ್ರಜ್ಞೆ ಬಂತು. ಸೋಲೊಪ್ಪಿಕೊಳ್ಳದ ವೀರ ಯೋಧ
ಕಾಲು ಹೋದ ಬಳಿಕ ಆನಂದನ್ ಸ್ವಲ್ಪ ದಿನ ಹುಟ್ಟೂರು ತಮಿಳುನಾಡಿನಲ್ಲಿ ಕಳೆದರು. ಒಂದೆಡೆ ಸೈನಿಕನಾಗಿ ಮುಂದೆ ಸೇವೆ ಮಾಡಲು ಆಗುವುದಿಲ್ಲ. ಮತ್ತೂಂದೆಡೆ ಸಾಯುವ ತನಕ ಹೀಗೆ ಇರಬೇಕೇ, ಮುಂದಿನ ಜೀವನ ಹೇಗೆ… ಎಂಬೆಲ್ಲ ಪ್ರಶ್ನೆಗಳು ಆನಂದನ್‌ಗೆ ಬಿಡದೆ ಕಾಡಲು ಶುರುವಾದವು. ಯಾರೊಂದಿಗೂ ಹೇಳಿಕೊಳ್ಳಲಾಗದ ಸ್ಥಿತಿಗೆ ಆನಂದನ್ ತಲುಪಿದ್ದರು. ಈ ವೇಳೆ ಅಂಗವಿಕಲರ ಕ್ರೀಡಾಕೂಟದಲ್ಲಿ ತಾನೇಕೆ ಪಾಲ್ಗೊಳ್ಳಬಾರದು ಎಂದುಕೊಂಡರು. ಇದಕ್ಕೆ ಸೈನ್ಯದಿಂದ ಪೂರ್ಣ ಬೆಂಬಲ ಸಿಕ್ಕಿತು. ಮುಂದೆ ನಡೆದದ್ದೆಲ್ಲ ಇತಿಹಾಸ.
Related Articles
2014ರಲ್ಲಿ ಟ್ಯುನೇಶಿಯ ಪ್ಯಾರಾಲಿಂಪಿಕ್ಸ್ ಗ್ರ್ಯಾನ್‌ಪ್ರಿಯಲ್ಲಿ ಆನಂದನ್ 2 ಚಿನ್ನ ಸೇರಿದಂತೆ ಒಟ್ಟು 3 ಪದಕ ಗೆದ್ದರು. ಅದೇ ವರ್ಷ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಸ್ವಲ್ಪದರಲ್ಲೇ ಪದಕ ಕಳೆದುಕೊಂಡರೂ ಅತ್ಯುತ್ತಮ ಟೈಮಿಂಗ್ಸ್‌ನೊಂದಿಗೆ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆಗೆ ಪಾತ್ರರಾದರು. 2015ರಲ್ಲಿ ಶ್ರೀಲಂಕಾದಲ್ಲಿ ನಡೆದ ಆರ್ಮಿ ಪ್ಯಾರಾ ಗೇಮ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ ಪದಕ ಗೆದ್ದರು. ಅದೇ ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಮಿಲಿಟರಿ ಗೇಮ್ಸ್‌ನ 200 ಮೀ.ನಲ್ಲಿ ಚಿನ್ನ ಗೆದ್ದರಲ್ಲದೆ ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲಿ ಹೊಸ ಕೂಟ ದಾಖಲೆ ಬರೆದರು. ಅದೇ ಕೂಟದಲ್ಲಿ 1 ಬೆಳ್ಳಿ ಪದಕ ಜಯಿಸಿದರು. 2016ರಲ್ಲಿ ನಡೆದ ಏಶ್ಯ-ಒಶಿಯಾನಿಯ ಕ್ರೀಡಾ ಕೂಟದ 400 ಮೀ.ನಲ್ಲಿ ಏಶ್ಯ ದಾಖಲೆಯೊಂದಿಗೆ ಕೂಟ ಮುಗಿಸಿ ಪ್ಯಾರಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 2017ರ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಕೂಟದಲ್ಲಿ 2 ಚಿನ್ನ, 2 ಬೆಳ್ಳಿ ಪದಕ ಒಲಿಸಿಕೊಳ್ಳುವಲ್ಲಿ ಆನಂದನ್ ಸಫಲರಾದರು. ಅದೇ ವರ್ಷ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದ 400 ಮೀ.ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
Advertisement
– ಹೇಮಂತ್ ಸಂಪಾಜೆ