ಬಾಗಲಕೋಟೆ: ನಗರದ ಹಿರಿಯ ಪತ್ರಕರ್ತ, ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರೂ ಆಗಿರುವ ಆನಂದ ಜಿಗಜಿನ್ನಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯಲ್ಲಿ ಆನಂದ ಅವರ ಪುತ್ರಿ ವರ್ಷಾ ಜಿಗಜಿನ್ನಿ (12), ಸಹೋದರ ವಿನೋದ ಅವರ ಪುತ್ರ ಶರಣ (7), ಆನಂದ ಅವರ ಅಕ್ಕನ ಪತಿ ರವಿ ಹಂಡಿ (40), ಪುತ್ರಿ ಲೇಖಾಶ್ರೀ ಹಂಡಿ (18), ಪುತ್ರ ನವೀನಕುಮಾರ ಹಂಡಿ (14)ಮೃತಪಟ್ಟಿದ್ದು, ಇವರೆಲ್ಲರೂ ದಾವಣಗೆರೆಯಲ್ಲಿ ರವಿ ಹಂಡಿ ಅವರ ಸಹೋದರಿಯನ್ನು ಭೇಟಿ ಮಾಡಿ ಬಾಗಲಕೋಟೆಗೆ ಮರಳುತ್ತಿದ್ದರು. ಈ ವೇಳೆ ನರಗುಂದ-ನವಲಗುಂದ ಮಧ್ಯದ ಅಮರಗೋಳ ಬಳಿ ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದ್ದು, ಜಿಗಜಿನ್ನಿಯವರ ಕುಟುಂಬದಲ್ಲಿ ದುಃಖ ಸಹಿಸಿಕೊಳ್ಳಲಾಗುತ್ತಿಲ್ಲವಾಗಿದೆ.
ಆನಂದ ಅವರ ಪುತ್ರಿ ವರ್ಷಾ ಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಳು. ಪುತ್ರಿಯ ಸಾವಿನ ಸುದ್ದಿ ತಿಳಿದು ತೀವ್ರ ದುಃಖೀತರಾಗಿದ್ದ ಆನಂದ ಮತ್ತು ಪತ್ನಿ ಹಾಗೂ ಪುತ್ರನನ್ನು ಕಳೆದುಕೊಂಡ ವಿನೋದ ಮತ್ತು ಅವರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಾಂತ್ವನ ಹೇಳಲು ಬಂದವರಿಗೂ ದುಃಖ ಉಮ್ಮಳಿಸಿ ಬಂದಿತ್ತು.
ವಿಧಿಯ ಆಟ: ಕಳೆದ ರವಿವಾರ ನಡೆದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ವೇಳೆ, ಈ ಮಕ್ಕಳು ಹಾಗೂ ಆನಂದ ಅವರ ಮಾವ ಮೈದಾನಕ್ಕೆ ಬಂದು ಪತ್ರಕರ್ತರ ತಂಡಕ್ಕೆ ಶುಭ ಹಾರೈಸಿ ಕೆಲ ಕಾಲ ಕಳೆದಿದ್ದರು. ಅಲ್ಲದೇ ದಾವಣಗೆರೆಗೆ ಕಾರಿನಲ್ಲಿ ತೆರಳಿದ್ದ ಈ ಐವರು ಕಾರಿನಲ್ಲಿ ಕುಳಿತು ಸೆಲ್ಫಿ ತೆಗೆದು ತಮ್ಮ ತಂದೆಗೆ ಕಳುಹಿಸಿ, ಖುಷಿ ಹಂಚಿಕೊಂಡಿದ್ದರು. ಆದರೆ, ಮರಳಿ ಬರುವ ವೇಳೆ ಮಕ್ಕಳು, ಹಂಡಿ ಮತ್ತು ಜಿಗಜಿನ್ನಿ ಕುಟುಂಬದಲ್ಲಿ ವಿಧಿಯ ಆಟ ಮೆರೆದಿದೆ.
ಆಘಾತ ವ್ಯಕ್ತಪಡಿಸಿದ ಸಿದ್ದರಾಮಯ್ಯ: ಆನಂದ ಜಿಗಜಿನ್ನಿ ಅವರ ಕುಟುಂಬದವರ ಸಾವಿನ ಸುದ್ದಿ ತಿಳಿದು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತೀವ್ರ ಆಘಾತ ವ್ಯಕ್ತಪಡಿಸಿ, ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಗಣ್ಯರ ಸಾಂತ್ವನ: ಮಾಜಿ ಸಚಿವ ಎಚ್.ವೈ. ಮೇಟಿ, ನಗರದ ಹಲವು ಗಣ್ಯರು, ವೈದ್ಯರು, ಗೆಳೆಯರು, ಸಂಬಂಧಿಕರು, ಪತ್ರಕರ್ತರು ಮನೆಗೆ ಭೇಟಿ ನೀಡಿ, ಜಿಗಜಿನ್ನಿ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು.