ಕಾರವಾರ: ಬೆಂಗಳೂರಿನಲ್ಲಿ ನಡೆದ ಟೆಕ್ಕಿ ಪತ್ನಿ ಕೊಲೆ ಆರೋಪಿ ಚಂದ್ರು ಕೊಂಡ್ಲಿ ಅಲಿಯಾಸ್ ಚಂದ್ರು ಮಡಿವಾಳ ತನಗೆ ಪರಿಚಯ. ಅದು ಬಿಟ್ಟರೆ ಆತನೊಂದಿಗೆ ರಾಜಕೀಯದಲ್ಲಾಗಲಿ ಅಥವಾ ಉದ್ಯಮದಲ್ಲಾಗಲಿ ಯಾವುದೇ ಸಂಬಂಧ ಹೊಂದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾರವಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದರು.
ಮಾಜಿ ಕೆಡಿಎ ಅಧ್ಯಕ್ಷರು ಕಳೆದ ಶನಿವಾರ ಮಾಡಿದ್ದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಿಂದ ಚಂದ್ರುವಿನ ಪರಿಚಯ ತನಗಿದೆ. ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ಜನ ಭಾಗವಹಿಸಿದ್ದ ಕಾರವಾರದ ಜೆಡಿಎಸ್ ಬೈಕ್ ರ್ಯಾಲಿಯಲ್ಲೂ ಸಹ ಚಂದ್ರ ಭಾಗವಹಿಸಿರಬೇಕು. ಅವರೆಲ್ಲರನ್ನು ನಾನು ನೆನಪಿಟ್ಟುಕೊಳ್ಳುವುದು
ಅಸಾಧ್ಯ. ನಾನು ಸಾರ್ವಜನಿಕ ಜೀವನದಲ್ಲಿ ಇರುವಂಥ ವ್ಯಕ್ತಿ. ಅನೇಕ ಜನ ಬಂದು ಫೋಟೊ ತೆಗೆದುಕೊಳ್ಳುತ್ತಾರೆ. ಪ್ರತಿಯೊಬ್ಬರ ಚರಿತ್ರೆಯನ್ನು ಗಮನಿಸಲು ತನ್ನಿಂದ ಸಾಧ್ಯವಿಲ್ಲ. ಟೆಕ್ಕಿ ಅಕ್ಷತಾಳ ಸಾವಿನ ಬಗ್ಗೆ ತನಗೂ ಸಹ ನೋವಿದೆ. ಈ ಸಾವು ಅವರಿಬ್ಬರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಆಗಿರಬಹುದು ಎಂದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿಯವರ ಆತ್ಮೀಯರಾದ ಶಾಸಕ ಸೈಲ್ ಅವರು ಸಹ ಬೇಲೇಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಆರೋಪಿಯೆಂಬುದನ್ನು ಮರೆಯಬಾರದು. ಇದನ್ನು ಶಂಭು ಶೆಟ್ಟಿ ನೆನಪಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಹಿನ್ನೆಲೆ: ಕಳೆದ ಶನಿವಾರ ಶಂಭು ಶೆಟ್ಟಿ ಹಾಗೂ ನಗರ ಘಟಕದ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರಿನಲ್ಲಿ ಟೆಕ್ಕಿ ಪತ್ನಿ ಕೊಲೆಯ ಆರೋಪ ಹೊತ್ತ ಚಂದ್ರು ಮಡಿವಾಳ ಕಾರವಾರದಲ್ಲಿ ಮಾಜಿ ಸಚಿವ ಅಸ್ನೋಟಿಕರ್ ಮನೆಗೆ ಬಂದಿದ್ದ ಎಂದು ಆರೋಪಿಸಿದ್ದರು. ಕೊಲೆ ನಡೆದ ಕೆಲ ದಿನಗಳ ನಂತರ ಸತ್ಯಾಂಶ ಹೊರಬಿದ್ದು ಆರೋಪಿ ಪತಿ ಚಂದ್ರುನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಅದೇ ವ್ಯಕ್ತಿ ಈಚೆಗೆ ನಡೆದ ಆನಂದ ಅಸ್ನೋಟಿಕರ್ ಅವರ ಜೆಡಿಎಸ್ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಭು ಶೆಟ್ಟಿ ಆರೋಪಿಸಿದ್ದರು. ಚಂದ್ರು ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ಪತ್ನಿಯನ್ನು ಕೊಂದು, ಕಾರವಾರಕ್ಕೆ ತನ್ನ ಸಹಚರ ರಾಜ್ವಿಂದರ್ ಸಿಂಗ್ ಜೊತೆ ಬಂದು ಆನಂದ ಅಸ್ನೋಟಿಕರ್ ಅವರ ಮನೆಯಲ್ಲಿ ಆಶ್ರಯಪಡೆದ ಸುದ್ದಿ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶೆಟ್ಟಿ ಆರೋಪಿಸಿದ್ದರು. ಬೈಕ್‌ರ್ಯಾಲಿ ದಿನ ಈ ಚಂದ್ರು ಮತ್ತು ರಾಜ್ವಿಂದರ್ ಸಿಂಗ್ ಇಬ್ಬರು ಆನಂದ ಅಸ್ನೋಟಿಕರ್ ಮನೆಯೆದುರು ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇಲ್ಲಿ ಸ್ಮರಣೀಯ.